ನವದೆಹಲಿ: ಸೀಮಾ ಕುಶ್ವಾಹ ನಿರ್ಭಯಾ ಸಾಮೂಹಿಕ ಅತ್ಯಾಚಾರ, ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಶ್ರದ್ಧಾ ವಾಕರ್ ಹತ್ಯೆಯಂತಹ ಪ್ರಮುಖ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದ ಸುಪ್ರೀಂ ಕೋರ್ಟ್ ವಕೀಲೆ ಮತ್ತು ಬಿಎಸ್ಪಿ ನಾಯಕಿ ಸೀಮಾ ಕುಶ್ವಾಹಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ಕುಶ್ವಾಹಾ ಅವರು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ಕ್ಕೆ 2022 ರ ಜನವರಿಯಲ್ಲಿ ಸೇರಿದ್ದರು.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿಯನ್ನು ಪ್ರತಿನಿಧಿಸಿದ ನಂತರ ಕುಶ್ವಾಹಾ ಖ್ಯಾತಿಗೆ ಬಂದರು. ನಿರ್ಭಯಾ ಜ್ಯೋತಿ ಟ್ರಸ್ಟ್ ಸ್ಥಾಪಿಸಿದ ಅವರು ಅತ್ಯಾಚಾರ ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ವಕೀಲರ ಅಭಿಯಾನವನ್ನು ಪ್ರಾರಂಭಿಸಿದರು.
ನಿರ್ಭಯಾ ಅತ್ಯಾಚಾರ ಪ್ರಕರಣವು 2012 ರಲ್ಲಿ ರಾಷ್ಟ್ರಾದ್ಯಂತ ಭಾರಿ ಸುದ್ದಿಯಾಗಿತ್ತು. ಪ್ರಕರಣದ ನಾಲ್ವರು ಅಪರಾಧಿಗಳನ್ನು 2020 ರ ಮಾರ್ಚ್ 20 ರಂದು ದೆಹಲಿಯ ತಿಹಾರ್ ಜೈಲಿನಲ್ಲಿ ಬೆಳಿಗ್ಗೆ 5:30 ಕ್ಕೆ ಗಲ್ಲಿಗೇರಿಸಲಾಯಿತು.