ನವದೆಹಲಿ : ದುಷ್ಕರ್ಮಿಗಳನ್ನು ನಿಯಂತ್ರಿಸುವ ನೆಪದಲ್ಲಿ ಅಶಾಂತಿಯನ್ನು ಶಾಂತಗೊಳಿಸಲು ದೇಶದ್ರೋಹ ಕಾನೂನು ಬಳಸುವುದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿ ಫೇಸ್ ಬುಕ್ ನಲ್ಲಿ ನಕಲಿ ವೀಡಿಯೊ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ವಿರುದ್ಧದ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುತ್ತಾ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ದೇಶದ್ರೋಹ ಆರೋಪದಲ್ಲಿ ಬಂಧಿತರಾಗಿದ್ದ ದೇವಿಲಾಲ್ ಬುರ್ದಕ್ ಮತ್ತು ಸ್ವರೂಪ್ ರಾಮ್ ಎಂಬವರಿಗೆ ಜಾಮೀನು ಮಂಜೂರು ಮಾಡುತ್ತಾ ಹೆಚ್ಚುವರಿ ಸೆಶನ್ಸ್ ಜಡ್ಜ್ ಧರ್ಮೇಂದ್ರ ರಾಣಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತೀಯ ದಂಡ ಸಂಹಿತೆ 124ಎ (ದೇಶದ್ರೋಹ) ಕುರಿತು ಈ ಪ್ರಕರಣದಲ್ಲಿ ನಿಜಕ್ಕೂ ತುಂಬಾ ಚರ್ಚೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸರಕಾರದ ಬಳಿ ಹೊಂದಿರುವ ದೇಶದ್ರೋಹ ಕಾನೂನು ಅತ್ಯಂತ ಪ್ರಭಾವಿ ಉಪಕರಣವಾಗಿದೆ ಎಂದು ಕೋರ್ಟ್ ತಿಳಿಸಿದೆ.
ಆದಾಗ್ಯೂ, ದುಷ್ಕರ್ಮಿಗಳನ್ನು ಹತೋಟಿಗೆ ತರುವ ನೆಪದಲ್ಲಿ ಅಶಾಂತಿಯನ್ನು ಶಾಂತಗೊಳಿಸಲು ದೇಶದ್ರೋಹ ಕಾನೂನು ಬಳಸುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.