ಮುಂಬೈ : ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ಶುಕ್ರವಾರ ಬಾಂದ್ರಾ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಕಂಗನಾ ವಿರುದ್ಧ ಕೋರ್ಟ್ ನಿರ್ದೇಶನದ ಮೇರೆಗೆ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಖಾಸಗಿ ದೂರಿನ ಆಧಾರದಲ್ಲಿ ಮೆಟ್ರೊಪಾಲಿಟನ್ ನ್ಯಾಯಾಲಯ ಬಾಂದ್ರಾ ಪೊಲೀಸರಿಗೆ ಕಂಗನಾ ಮತ್ತು ಆಕೆಯ ಸಹೋದರಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ನಿರ್ದೇಶಿಸಿತ್ತು. ಪ್ರಕರಣದಲ್ಲಿ ಬಂಧನಕ್ಕೆ ಮಧ್ಯಂತರ ತಡೆ ನೀಡಿ, ಜ.8ರಂದು ವಿಚಾರಣೆಗೆ ಹಾಜರಾಗುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿತ್ತು.
ಸಹೋದರಿಯರ ವಿರುದ್ಧ ಜನರ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ, ದೇಶದ್ರೋಹ, ಎರಡು ಸಮೂಹಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳದ ಆಧಾರದಲ್ಲಿ ಶತ್ರುತ್ವ ಪ್ರಚೋದಿಸುವ ಆರೋಪಗಳಡಿ ಎಫ್ ಐಆರ್ ದಾಖಲಾಗಿದೆ.
ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ಕ್ಕೆ ಹೋಲಿಸಿದ್ದ ನಟಿ ಕಂಗನಾ ಮಹಾರಾಷ್ಟ್ರ ಸರಕಾರದ ವಿರುದ್ಧ ಟೀಕೆ ಮಾಡುವ ಭರದಲ್ಲಿ ಹಲವು ಆಕ್ಷೇಪಾರ್ಹ ಟ್ವೀಟ್ ಗಳು, ಹೇಳಿಕೆಗಳನ್ನು ನೀಡಿದ್ದರು.