ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಬಿಜೆಪಿಯವರಿಗೆ ರಾಷ್ಟ್ರಧ್ವಜದ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಹಾಗೂ ಕಾಂಗ್ರೆಸ್‌ನ ಹೋರಾಟದ ಫಲವಾಗಿ ಬಿಜೆಪಿಯವರಿಗೆ ಇಂದು ರಾಷ್ಟ್ರ ಧ್ವಜ ಹಿಡಿಯುವ ಸ್ವಾತಂತ್ರ್ಯ ಸಿಕ್ಕಿದೆ. ರಾಷ್ಟ್ರಧ್ವಜವನ್ನು ಮತ್ತು ಸಂವಿಧಾನವನ್ನು ಬದಲಾಯಿಸಲು ಎಂದು ಹೊರಟಿದ್ದ ಬಿಜೆಪಿಯವರು, ಜನರು ನಮ್ಮನ್ನೇ ಬದಲಾಯಿಸುತ್ತಾರೆ ಎಂದು ತಿಳಿದಾಗ ಹರ್ ಘರ್ ತಿರಂಗಾ ಎಂಬ ಅಭಿಯಾನ ನಡೆಸುತ್ತಿದ್ದಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.
75ನೇ ಸ್ವಾತಂತ್ರ್ಯೋತ್ಸವ ದೇಶದಲ್ಲಿ ಬಿಜೆಪಿ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆಯಲಿದ್ದು, ಬ್ರಿಟಿಷರ ನಂತರ ಬಿಜೆಪಿ ವಿರುದ್ಧದ ಹೋರಾಟದೊಂದಿಗೆ ಎರಡನೇ ಅಧ್ಯಾಯ ದೇಶದ ಜನರಿಂದ ಆರಂಭವಾಗಲಿದೆ ಎಂದು ಹೇಳಿದರು.
ಖಾಸಗೀಕರಣದ ಮೂಲಕದೇಶವನ್ನು ಸಾಲದ ಕೂಪಕ್ಕೆ ತಳ್ಳಿದ ಬಿಜೆಪಿ ‘ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ್ದು, ರಾಷ್ಟ್ರಧ್ವಜಕ್ಕೆ ಹಣ ಪಡೆಯುತ್ತಿದೆ ಎಂದು ಲೇವಡಿ ಮಾಡಿದರು.