SDPI ಪಕ್ಷದ ಕಚೇರಿಗಳಿಗೆ ಸೀಲ್ ಹಾಕಿರುವುದು ಅಸಾಂವಿಧಾನಿಕ,ಕೂಡಲೇ ತೆರವುಗೊಳಿಸಲು ಎಸ್‌ಡಿಪಿಐ ಆಗ್ರಹ

Prasthutha|

ಮಂಗಳೂರು: ದ.ಕ ಜಿಲ್ಲಾದ್ಯಂತ ಕಳೆದ ದಿನ (ಬುಧವಾರ) ಮತ್ತು ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಿಗೆ ಮತ್ತು ಮಾಹಿತಿ ‌ಮತ್ತು ಸೇವಾ ಕೇಂದ್ರಗಳಿಗೆ ಪೋಲೀಸ್ ಅಧಿಕಾರಿಗಳು ಪಕ್ಷದ ನಾಯಕರಿಗೆ ಮಾಹಿತಿ ನೀಡದೆ ಮಹಜರು ನಡೆಸಿ ಬೀಗ ಜಡಿದು ಸೀಲ್ ಹಾಕಲಾದ ಘಟನೆ ಖಂಡನೀಯ ಎಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, SDPI ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿ ದೇಶಾದ್ಯಂತ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿರುವ ಒಂದು ರಾಜಕೀಯ ಪಕ್ಷವಾಗಿದೆ. ದೇಶದ ಹಲವಾರು ರಾಜ್ಯಗಳಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಬಹಳಷ್ಟು ಚುನಾಯಿತ ಜನ ಪ್ರತಿನಿಧಿಗಳು ಪಕ್ಷದಿಂದ ಆಯ್ಕೆಯಾಗಿರುತ್ತಾರೆ.

ನಮ್ಮ ಜಿಲ್ಲೆಯಲ್ಲೂ ಇನ್ನೂರಕ್ಕೂ ಹೆಚ್ಚು ಜನ ಪ್ರತಿನಿಧಿಗಳು SDPI ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆದ್ದರಿಂದ ನಮ್ಮ ರಾಜಕೀಯ ಚಟುವಟಿಕೆಗಳು ನಡೆಸಲು ಕಚೇರಿ ಅತ್ಯಗತ್ಯವಾಗಿದೆ ಹಾಗೂ ಪಕ್ಷದ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ಉಚಿತವಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸರಕಾರಿ ಸೌಲಭ್ಯಗಳನ್ನು ಒದಗಿಸುತ್ತಿರುವ ಮಾಹಿತಿ ಮತ್ತು ಸೇವಾಕೇಂದ್ರಗಳಿಗೆ ಪೊಲೀಸ್ ಇಲಾಖೆ ಬೀಗ ಜಡಿದಿದ್ದು ಇದರಿಂದಾಗಿ ಸಾರ್ವಜನಿಕ ಸೇವೆಗೆ ಸಮಸ್ಯೆ ಆಗಿದೆ. ಇದೀಗ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಸಲ್ಲಿಸುವ ಸಮಯವಾಗಿದ್ದು ದಿನಂಪ್ರತಿ ನೂರಾರು ಬಡ ವಿದ್ಯಾರ್ಥಿಗಳು ಸೇವಾಕೇಂದ್ರಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ವೇತನ ಮತ್ತು ಇತರ ಶೈಕ್ಷಣಿಕ ಸೌಲಭ್ಯ ಗಳಿಗೆ ಸಂಬಂಧಿಸಿದ ಉಚಿತ ಮಾಹಿತಿ ಮತ್ತು ಸೇವೆಗಳನ್ನು ಪಡೆಯುತ್ತಿದ್ದಾರೆ. ಕೇಂದ್ರ ಸರಕಾರವು PFI ಸಂಘಟನೆಗೆ ನಿಷೇಧ ಹೇರಿದೆಯೇ ಹೊರತು ಎಸ್‌ಡಿಪಿಐ ಗೆ ಅಲ್ಲ ಎಂಬ ಮಾಹಿತಿ ಇದ್ದರೂ ನಿಷೇಧ ಹೆಸರಿನಲ್ಲಿ ಹಲವು ಕಡೆಗಳಲ್ಲಿ ಅಧಿಕಾರಿಗಳು ಪೂರ್ವ ಗ್ರಹ ಪೀಡಿತರಾಗಿ SDPI ಕಚೇರಿ ಮತ್ತು ಸೇವಾಕೇಂದ್ರಗಳಿಗೆ ಬೀಗ ಜಡಿದಿರುವುದು ಬೇಜವ್ದಾರಿಯುತ ವರ್ತನೆಯಾಗಿದೆ. ಇದರ ವಿರುದ್ಧ ಪಕ್ಷವೂ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.

- Advertisement -

ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಜಿಲ್ಲೆಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಯವರು ಪಕ್ಷದ ಕಚೇರಿಯನ್ನು ಹೇಗೆ ಸೀಲ್ ಮಾಡಿದ್ದೀರಿ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಅದೇ ರೀತಿ ಬೀಗ ಜಡಿದು ಸೀಲ್ ಮಾಡಲಾದ ಪಕ್ಷದ ಕಚೇರಿ ಮತ್ತು ಸೇವಾಕೇಂದ್ರಗಳನ್ನು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp