ಉಳ್ಳಾಲ: ತೊಕ್ಕೋಟ್ಟು ಕುತ್ತಾರ್ ರಸ್ತೆ ದುರಸ್ತಿ ಮಾಡದಿದ್ದರೆ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ ಡಿಟಿಯು ಎಚ್ಚರಿಕೆ ನೀಡಿದೆ.
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ದ.ಕ ಜಿಲ್ಲಾಧ್ಯಕ್ಷ ಝಾಕೀರ್ ಉಳ್ಳಾಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತೊಕ್ಕೋಟು ಕುತ್ತಾರ್ ಮಧ್ಯೆ ಹದಗೆಟ್ಟ ಮುಖ್ಯರಸ್ತೆಯನ್ನು ದುರಸ್ತಿಗೊಳಿಸಬೇಕೆಂದು SDTU ಉಳ್ಳಾಲ ಅಸೆಂಬ್ಲಿ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ವಿವಿಧ ಅಟೋ ಸಂಘಟನೆಗಳು ಚಾಲಕರು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪ್ರತಿಭಟನೆಯ ಮೂಲಕ ಅಧಿಕಾರಿಗಳ ಗಮನ ಸೆಳೆದಿದ್ದರು. ಹದಿನೈದು ದಿನದೊಳಗಾಗಿ ದುರಸ್ತಿ ಮಾಡುತ್ತೇವೆ ಎಂದು ಅಧಿಕಾರಿಗಳು SDTU ನಾಯಕರಲ್ಲಿ ಭರವಸೆ ನೀಡಿದ್ದರು. ಆದರೆ ಇಪ್ಪತ್ತೇಳು ದಿನಗಳಾದರೂ ಜನರ ಬೇಡಿಕೆಗಳಿಗಳನ್ನು ಈಡೇರಿಸದೆ ಕೊಟ್ಟ ಮಾತು ತಪ್ಪಿದ್ದಾರೆ. ಇಂತಹ ಅಧಿಕಾರಿಗಳ ಕಚೇರಿಗಳಿಗೆ ಬೀಗ ಜಡಿದು, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳಿಂದ ಸಾರ್ವಜನಿಕರು ಕಿರುಕುಳ ಅನುಭವಿಸುವಂತಾಗಿದೆ ಎಂದು ಝಾಕೀರ್ ಉಳ್ಳಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.