ವಯನಾಡಿನಲ್ಲಿ SDPI ಸೇವೆಯನ್ನು ವಿಶ್ವವೇ ಕೊಂಡಾಡಿದೆ : ಇಲ್ಯಾಸ್ ತುಂಬೆ

Prasthutha|

- Advertisement -

ಮಂಗಳೂರು : ಕೇರಳದ ವಯನಾಡಿನಲ್ಲಿ ಪ್ರಕ್ರತಿ ವಿಕೋಪಕ್ಕೆ ಹಲವಾರು ಮಂದಿ ಮಣ್ಣಿನಡಿಯಲ್ಲಿ ತಮ್ಮ ಜೀವ ಕಳೆದುಕೊಂಡಾಗ ಎಸ್‌ಡಿಪಿಐ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಹಗಲಿರುಳು ಮಾಡಿದ ಸೇವೆಯನ್ನು ವಿಶ್ವವೇ ಕೊಂಡಾಡಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಹೇಳಿದರು.

ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರದ ರೊಸಾರಿಯೊ ಚರ್ಚ್ ಸಭಾಭವನದಲ್ಲಿ ನಡೆದ ನಾಯಕತ್ವ ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪಕ್ಷದ ನಾಯಕರ ಒಂದೇ ಒಂದು ಕರೆಗೆ ಅಪಾಯವನ್ನು ಲೆಕ್ಕಿಸದೆ ಹೋರಾಟ ಮತ್ತು ಸಾಮಾಜಿಕ ಸೇವೆಗೆ ಸದಾ ಸಿದ್ದವೆಂದು ತೋರಿಸಿ ಕೊಟ್ಟ ಕಾರ್ಯಕರ್ತರ ಪಕ್ಷವಾಗಿದೆ ಎಸ್‌ಡಿಪಿಐ ಎಂದು ಬಣ್ಣಿಸಿದರು.

- Advertisement -

ಬೂತ್, ವಾರ್ಡ್ ನಾಯಕರು ತಮ್ಮ ತಮ್ಮ ವಾರ್ಡ್‌‌ಗಳಲ್ಲಿ ನಾಯಕತ್ವ ಗುಣವುಳ್ಳ ಕಾರ್ಯಕರ್ತರನ್ನು ಸಜ್ಜು ಗೊಳಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ರಾಜ್ಯ ಸಮಿತಿ ಸದಸ್ಯ ಅತ್ತಾವುಳ್ಳ ಜೋಕಟ್ಟೆ ಮಾತನಾಡಿ, ಅನ್ಯಾಯ, ಅಕ್ರಮ, ಅನೀತಿ ವಿರುದ್ಧ ಹೋರಾಟ ಮಾಡಿದ ಕಾರಣಕ್ಕೆ ನಮ್ಮ ಪಕ್ಷದ ಹಲವಾರು ನಾಯಕರು, ಕಾರ್ಯಕರ್ತರು ಅಕ್ರಮಾ ಬಂಧನಕ್ಕೆ ಒಳಗಾಗ್ಗಿದ್ದಾರೆ. ಆದರೂ ನಮ್ಮ ಕಾರ್ಯಕರ್ತರು ಎದೆಗುಂದದೇ ದಮನಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಈಗಲೂ ಹೋರಾಟ ಮುಂದುವರಿಸಿದ್ದಾರೆ ಎಂದರು.

ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನ ಸಭಾ ಸಮಿತಿ ಅಧ್ಯಕ್ಷ ಸುಹೈಲ್ ಖಾನ್ ಪ್ರಸ್ತಾಪಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಕೋಶಾಧಿಕಾರಿ ಇಬ್ರಾಹಿಂ ದುಬಾಲ್, ಬೂತ್ ಮತ್ತು ವಾರ್ಡ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸಿದ್ದೀಕ್ ಬೆಂಗ್ರೆ ಸ್ವಾಗತಿಸಿದರು. ಕಾರ್ಯದರ್ಶಿ ಅಲಿ ಅಕ್ಬರ್ ಮಿಲಾಯತ್ ಧನ್ಯವಾದ ಸಮರ್ಪಿಸಿದರು. ಕ್ಷೇತ್ರ ಸಮಿತಿ ಸದಸ್ಯ ಬಶೀರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.



Join Whatsapp