ಮಂಗಳೂರು: ಅನೈತಿಕ ಪೊಲೀಸ್ ಗಿರಿಯನ್ನು ಮಟ್ಟ ಹಾಕಲು ರಾಜ್ಯ ಗೃಹ ಸಚಿವರ ಆದೇಶದಂತೆ ಮಂಗಳೂರಿನಲ್ಲಿ ಇತ್ತೀಚೆಗೆ ರಚನೆಯಾದ ಆ್ಯಂಟಿ ಕಮ್ಯುನಲ್ ವಿಂಗ್’ಗೆ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸಮರ್ಥ ತಂಡ ರಚಿಸಬೇಕು ಮತ್ತು ಇಂತಹ ತಂಡವನ್ನು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕೂಡಾ ರಚಿಸುವಂತೆ ಆಗ್ರಹಿಸಿ SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ರವರಿಗೆ ಪತ್ರ ಬರೆದಿದ್ದಾರೆ.
ಗೃಹ ಸಚಿವರಿಗೆ ಬರೆದ ಪತ್ರದಲ್ಲಿ
ಗೃಹ ಸಚಿವರಾದ ಬಳಿಕ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಂಗಳೂರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿಯನ್ನು ನಿಯಂತ್ರಿಸಲು ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುತ್ತೀರಿ. ಅದರಂತೆ ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತರು ಈ ಬಗ್ಗೆ ಆ್ಯಂಟಿ ಕಮ್ಯುನಲ್ ವಿಂಗ್ ನೇಮಿಸಿ ಆದೇಶ ಹೊರಡಿಸಿರುತ್ತಾರೆ. ಇದಕ್ಕಾಗಿ ತಮಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ಆದರೆ ಸದ್ರಿ ತಂಡವು ಮಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ACP ಹಾಗೂ ಇನ್ಸ್ಪೆಕ್ಟರ್ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ರಚನೆ ಆಗಿರುತ್ತದೆ. ಇದರಿಂದ ತಮ್ಮ ಮಹತ್ವಾಕಾಂಕ್ಷಿಯ ತಂಡದ ರಚನೆ ಫಲಪ್ರದವಾಗುವುದು ಅಸಾಧ್ಯ ಎಂಬುದು ನಮ್ಮ ಅಭಿಪ್ರಾಯ. ಮಂಗಳೂರಿನಂತಹ ಕೋಮುಸೂಕ್ಷ್ಮ ಪ್ರದೇಶದಲ್ಲಿ ಕೋಮು ವೈಷಮ್ಯದ ಅನೈತಿಕ ಪೊಲೀಸ್ ಗಿರಿಯನ್ನು ನಿಯಂತ್ರಿಸಬೇಕಾದರೆ ಕನಿಷ್ಠ ಪಕ್ಷ ದಕ್ಷ ಪ್ರಭೇಷನರಿ IPS ಅಧಿಕಾರಿಗಳ ನೇತೃತ್ವದ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಬೇಕು ಮತ್ತು ಈ ತಂಡದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜನೆ ಮಾಡಿ ಅವರು ಯಾವುದೇ ಒತ್ತಡಗಳಿಗೆ ಮಣಿಯದೇ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿ ಕೊಡಬೇಕೆಂಬುವುದು ಜಿಲ್ಲೆಯ ಶಾಂತಿಪ್ರಿಯ ಜನತೆಯ ಆಗ್ರಹವಾಗಿದೆ. ಸದ್ರಿ ತಂಡವನ್ನು ಕೇವಲ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಗೆ ಸೀಮಿತ ಗೊಳಿಸದೆ ದಕ್ಷಿಣ ಕನ್ನಡ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಗೂ ನೇಮಿಸಬೇಕೆಂದು ತಮ್ಮಲ್ಲಿ ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.