ಮುಂದಿನ ವಿಧಾನಸಭೆಯಲ್ಲಿ ಎಸ್ ಡಿಪಿಐ ನಿರ್ಣಾಯಕ ಪಾತ್ರ ವಹಿಸಲಿದೆ: ಅಬ್ದುಲ್ ಮಜೀದ್ ಮೈಸೂರು

Prasthutha|

ಉಳ್ಳಾಲ:  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಗಳನ್ನು ಕಣಕ್ಕೆ ಇಳಿಸಲಿದ್ದು, ರಾಜ್ಯದಲ್ಲಿ ಪ್ರಬಲ ಪರ್ಯಾಯ ಶಕ್ತಿಯಾಗಿ ಮೂಡಿಬರುವ ಮೂಲಕ ಮುಂದಿನ ವಿಧಾನಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.

- Advertisement -

 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಕಲ್ಲಾಪು ಯುನಿಟಿ ಹಾಲ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಹೀಗಾಗಿ ತನ್ನ ಆಡಳಿತ ವೈಫಲ್ಯ ಮುಚ್ಚಿಡಲು ಕೋಮು ಆಧಾರದಲ್ಲಿ ಜನತೆಯನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಸಚಿವರೇ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿದ್ದು ನಾವು ಸರ್ಕಾರ ನಡೆಸದೇ ಮ್ಯಾನೇಜ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸರ್ಕಾರದ ವೈಫಲ್ಯವನ್ನು ಜನರ ಮುಂದಿಡಬೇಕಾಗಿದ್ದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಆಂತರಿಕ ಕಚ್ಚಾಟದಲ್ಲಿ ಕಾಲ ಕಳೆಯುತ್ತಿವೆ. ಹೀಗಾಗಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಎಸ್ ಡಿಪಿಐ ಮೂಡಿಬಂದಿದ್ದು ರಾಜ್ಯದೆಲ್ಲೆಡೆ ಜನತೆ ಪಕ್ಷದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ ಎಂದರು.

 ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕ್ಷೇತ್ರದಲ್ಲಿ ಹಲವಾರು ಖಾಸಗಿ ಮೆಡಿಕಲ್ ಕಾಲೇಜು ಇದ್ದರೂ ಒಂದೇ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲಿಗೆ ತರಲು ಇಲ್ಲಿನ ಜನಪ್ರತಿನಿಧಿಗೆ ಸಾಧ್ಯವಾಗಿಲ್ಲ. ಆರೋಗ್ಯ ಸಚಿವ ಸ್ಥಾನ ಸಿಕ್ಕಿದ್ದರೂ ಒಂದು ಸುಸಜ್ಜಿತ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ಕ್ಷೇತ್ರಕ್ಕೆ ತಂದಿಲ್ಲ. ಇಲ್ಲಿರುವ ಮಲ್ಟಿನ್ಯಾಷನಲ್ ಕಂಪೆನಿಗಳಿಗೆ, ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳಿಗೆ, ಖಾಸಗಿ ಕಂಪೆನಿಗಳ ಅನುಕೂಲಕ್ಕೆ ಬೇಕಾಗಿ ಅವರು ಸಂಚರಿಸುವ ರಸ್ತೆಯನ್ನು ಅಗಲಗೊಳಿಸಿದ್ದೇ ಸಾಧನೆ ಎಂದು ಬಿಂಬಿಸಲಾಗಿದೆ ಎಂದು ಹೇಳಿದರು.

- Advertisement -

  ಎಸ್ ಡಿಪಿಐ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ಕ್ಷೇತ್ರದಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಅಚ್ಚರಿಯ ಫಲಿತಾಂಶದ ಮೂಲಕ ಜಯಗಳಿಸಲಿದೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು. ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಸಮಾರೋಪ ಭಾಷಣ ಮಾಡಿದರೆ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

 ವೇದಿಕೆಯಲ್ಲಿ ಎಸ್ ಡಿ ಪಿ ಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆಸಿ ರೋಡ್, ಝಾಕಿರ್ ಉಳ್ಳಾಲ್, ಕ್ಷೇತ್ರ ಸಮಿತಿ ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಪಾವೂರು ಗ್ರಾ.ಪಂ ಅಧ್ಯಕ್ಷೆ ಕಮರುನ್ನಿಸಾ ನೌಫಲ್, ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸಜಿಪ ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಕ್ಬಾಲ್, ಉಪಾಧ್ಯಕ್ಷ ಇಕ್ಬಾಲ್, ಉಳ್ಳಾಲ ನಗರಸಭಾ ಕೌನ್ಸಿಲರ್ ರಮೀಜ್ ಕೋಡಿ, ಅಸ್ಗರ್ ಅಲಿ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಸೆಲಿಮಾಬಿ ಹಸೀನಾ ಶಮೀರ್ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ SDPI ರಾಷ್ಟ್ರೀಯ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ ಅವರನ್ನು ಕ್ಷೇತ್ರ ಸಮಿತಿಯ ವತಿಯಿಂದ ಶಾಲು ಹಾಕಿ ಹೂಗುಚ್ಚ ನೀಡಿ ಸನ್ಮಾನಿಸಲಾಯಿತು . ಅಶ್ರಫ್ ಮೋನು ಬೋಳಿಯಾರ್ ಕಾರ್ಯಕ್ರಮ ನಿರೂಪಿಸಿದರು ಝಾಹಿದ್ ಮಲಾರ್ ಸ್ವಾಗತಿಸಿ ಧನ್ಯವಾದಗೈದರು.



Join Whatsapp