ಮಂಗಳೂರು : ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬದ ಪ್ರಮುಖ ಕರ್ಮವಾದ ಕುರ್ಬಾನಿಗೆ ತಡೆಯೊಡ್ಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಘಪರಿವಾರ ಪೂರ್ವ ಯೋಜಿತವಾಗಿ ತಯಾರಾಗಿದೆ ಎಂಬುದನ್ನು ಸ್ವತಃ ಸಂಘಪರಿವಾರದ ನಾಯಕರೇ ಕಾನೂನಿನ ಯಾವುದೇ ಭಯವಿಲ್ಲದೆ ಹೇಳಿಕೆಗಳನ್ನು ಕೊಡುತ್ತಿರುವುದನ್ನು ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಂಘಪರಿವಾರದ ಕಿಡಿಗೇಡಿ ನಾಯಕರ ವಿರುದ್ಧ ಕ್ರಮ ಕೈಗೊಂಡು ಬಕ್ರೀದ್ ಹಬ್ಬ ಸುಸ್ಸೂತ್ರವಾಗಿ ನಡೆಯಲು ಅನುಕೂಲಕರ ವಾತಾವರಣ ಸೃಷ್ಟಿ ಮಾಡಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.
ಜಾನುವಾರು ಹತ್ಯೆ ವಿರೋಧಿ ಕಾಯಿದೆ ಪ್ರಕಾರ ಕಾಲಂ 4,5,6,7,8 ಹಸು,ಹಸುವಿನ ಕರು,ಹೋರಿ ಎಮ್ಮೆ ಕೋಣ,ಇತ್ಯಾದಿ ಗಳು ಹದಿಮೂರು ವರ್ಷಕ್ಕಿಂತ ಕಡಿಮೆ ಪ್ರಾಯದಾಗಿದ್ದರೆ ಅದನ್ನು ಹತ್ಯೆ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ವಾಗಿದೆ,(ಇದಕ್ಕೂ ಸಾಕಷ್ಟು ವಿರೋಧದ ವಿದೆ) ಆದರೆ ಇದು ಕೇವಲ ಕುರ್ಬಾನಿಗೆ ಮಾತ್ರ ಸೀಮಿತ ವಾಗಿಲ್ಲ ಎಂಬುದು ಗಮನಾರ್ಹ ವಾಗಿದೆ.
ಆದರೆ ಇದೇ ಸಂದರ್ಭದಲ್ಲಿ ವಿಶ್ವದಲ್ಲಿ ಬೀಫ್ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಬಿಜೆಪಿ ಸರ್ಕಾರದ ಆಡಳಿತ ಇರುವ ಭಾರತವೇ ನಂ ಒನ್ ಇದೆ,ಹಾಗೂ ಬಿಜೆಪಿ ಸಂಸದರು ಹಾಗೂ ನಾಯಕರೇ ಈ ಎಲ್ಲಾ ಕಸಾಯಿಖಾನೆಗಳ ಒಡೆತನವನ್ನು ಹೊಂದಿದ್ದಾರೆ.ಅದೂ ಕೂಡ ಹಿಂದುತ್ವದ ಪ್ರಖರ ನಾಯಕ ಎಂದೆನಿಸಿಕೊಂಡು ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಗೂಂಡಾ ರಾಜ್ಯ ಎಂಬ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶದಲ್ಲೇ ಇವೆಲ್ಲದರ ಕಾರ್ಖಾನೆ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಗೋಮಾಂಸ ಕೇವಲ ಮುಸ್ಲಿಮರ ಆಹಾರ ಎಂಬಂತೆ ಸಂಘಪರಿವಾರ ಪ್ರಚಾರ ಪಡಿಸುತ್ತಿದೆ.ವಾಸ್ತವದಲ್ಲಿ ದೇಶದ ಶೇಕಡಾ 80% ಜನರ ಆಹಾರ ಹಕ್ಕಾಗಿದೆ ಗೋಮಾಂಸ,ಮುಸ್ಲಿಮ್ ಜನಸಂಖ್ಯೆ 16% ಶೇಕಡಾ ಮಾತ್ರ ಉಳಿದ 64% ಮುಸ್ಲಿಮೇತರರು ಆಗಿದ್ದಾರೆ. ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಯಲ್ಲಿ ಹೇಳುವಂತೆ ” ನಿಮಗೆ ಆಶ್ಚರ್ಯ ವಾಗಬಹುದು ಪ್ರಾಚೀನ ಹಿಂದೂ ವಿಧಿ ಮತ್ತು ಆಚರಣೆಗಳ ಪ್ರಕಾರ ದನದ ಮಾಂಸ ತಿನ್ನದಿದ್ದರೆ ಆತ ಒಳ್ಳೆಯ ಹಿಂದುವಾಗಲು ಸಾಧ್ಯವಿರಲಿಲ್ಲ.
‘ಈ ಭಾರತದಲ್ಲೇ ಒಂದು ಕಾಲವಿತ್ತು ದನವನ್ನು ತಿನ್ನದೇ ಯಾವ ಬ್ರಾಹ್ಮಣನೂ ಬ್ರಾಹ್ಮಣ ನಾಗಿ ಇರಲು ಸಾಧ್ಯ ವಿರಲಿಲ್ಲ.ಸನ್ಯಾಸಿಗಳು ಅಥವಾ ರಾಜರು ಅಥವಾ ಯಾರಾದರೂ ಮಹಾಪುರುಷರು ಮನೆಗೆ ಬಂದಾಗ ಅತ್ಯತ್ತಮವಾದ ಎತ್ತನ್ನು ಕಡಿಯಲಾಗುತ್ತಿತ್ತು ಎಂಬುದನ್ನು ವೇದಗಳಲ್ಲಿ ನೀವು ಓದಬಹುದು.” ಎಂಬುದಾಗಿ ಸ್ವಾಮಿ ವಿವೇಕಾನಂದರು ತಮ್ಮ ಸಮಗ್ರ ಕೃತಿಯ ಸಂಪುಟ -3 ಸಂಚಿಕೆ 536 ರಲ್ಲಿ ಉಲ್ಲೇಖ ಮಾಡಿದ್ದಾರೆ. ಇದರಂತೆ ಸಂಘಪರಿವಾರ ತಮ್ಮ ಹಿಡನ್ ಸಂಘಪರಿವಾರ ಗೋವಿನ ನೆಪದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿದೆ.
ಈ ದೇಶದ ಸಂವಿಧಾನ ಪ್ರಕಾರ ದೇಶದಲ್ಲಿರುವ ಪ್ರತಿಯೊಂದು ಧರ್ಮದವರಿಗೂ ಅವರವರ ಧರ್ಮದ ಅನುಸಾರವಾಗಿ ಜೀವನ ಮಾಡುವಂತಹ ಹಕ್ಕುಗಳನ್ನು ಖಾತ್ರಿಪಡಿಸಿಕೊಂಡು ಜೀವಿಸುವಂತಹ ಹಕ್ಕು ಇದೆ.ಆದರೆ ಫ್ಯಾಶಿಸಂ ಹಿಂದುತ್ವ ಸಂಘಟನೆಗಳು ಅಧಿಕಾರ ಹಿಡಿಯುವ ಭಾಗವಾಗಿ ಮುಸ್ಲಿಮರ ಹಾಗೂ ಇನ್ನಿತರ ಅಲ್ಪಸಂಖ್ಯಾತ ವರ್ಗಗಳ ಧಾರ್ಮಿಕ ಹಕ್ಕುಗಳನ್ನು ವಿರೋಧಿಸಿ ಅದರ ವಿರುದ್ಧ ನೀತಿ ನಿಯಮಗಳನ್ನು ಜಾರಿಗೆ ತಂದು ಈ ದೇಶದ ಸಂವಿಧಾನ ವಿರುದ್ಧ ವಾದ ನಿಲುವುಗಳನ್ನು ತಾಳುತ್ತಿದೆ.ಇದರ ಮುಂದುವರಿದ ಭಾಗವಾಗಿದೆ ಗೋಹತ್ಯೆ ನಿಷೇಧ ಕಾಯ್ದೆ ಕೂಡ.ಇದಕ್ಕೆ ಕೂಡ ದೇಶದ ಬಹುತೇಕ ಜನರ ವಿರೋಧ ಇದ್ದರೂ ಏಕಪಕ್ಷೀಯವಾಗಿ ಸರ್ವಾಧಿಕಾರಿ ರೀತಿಯಲ್ಲಿ ಈ ನಿಯಮವನ್ನು ಜಾರಿ ಮಾಡಿದೆ.
ಆದ್ದರಿಂದ ಇದು ಭಾವನಾತ್ಮಕವಾಗಿ ಜನರನ್ನು ಪ್ರಚೋದಿಸಿ ಸಮಾಜದಲ್ಲಿ ಗಲಭೆಯನ್ನು ಸೃಷ್ಟಿಸುವ ಹುನ್ನಾರವೇ ಹೊರತು ಬೇರೇನೂ ಅಲ್ಲ,ಹಾಗಾಗಿ ಪೋಲಿಸ್ ಇಲಾಖೆ ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಗೆ ಮತ್ತು ಇದರ ಪ್ರಮುಖ ಕರ್ಮವಾದ ಕುರ್ಬಾನಿಯನ್ನು ಸುಸೂತ್ರವಾಗಿ ಅನುವು ಮಾಡಿಕೊಟ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಚೋದನೆ ಮಾಡುತ್ತಿರುವ ಸಂಘಪರಿವಾರದ ಕಿಡಿಗೇಡಿ ನಾಯಕರ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.