ಬೆಂಗಳೂರು: ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಹುಚರ್ಚಿತ ವಿಷಯವಾಗಿರುವ ಬಿಟ್ ಕಾಯಿನ್ ಹಗರಣವನ್ನು ಗೃಹಸಚಿವರು ಸಿಬಿಐಗೆ ವಹಿಸಿದ್ದೇವೆ ಎಂದರೆ, ಸಿಎಂ ಬೊಮ್ಮಾಯಿ ಜಾರಿ ನಿರ್ದೇಶನಾಲಯಕ್ಕೆ ವಹಿಸಿದ್ದೇವೆ ಎನ್ನುತ್ತಿದ್ದಾರೆ. ಈ ಕುರಿತು ತಕ್ಷಣ ಸ್ಪಷ್ಟನೆ ನೀಡಬೇಕು.
ಅಲ್ಲದೇ, ಆರೋಪಿ ಶ್ರೀಕೃಷ್ಣ ಜನಧನ್ ಖಾತೆಯಿಂದ ಹಣ ಕದ್ದು, ಸುಮಾರು 8 ಸಾವಿರ ಕೋಟಿಯನ್ನು 150 ಮಂದಿ ಖಾತೆಗೆ ವರ್ಗಾವಣೆ ಮಾಡಿದ್ದಾನೆ ಎಂಬ ಆರೋಪ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಆಗ್ರಹಿಸಿದ್ದಾರೆ.
ಆರೋಪಿ ಕೇವಲ ಕೂಲಿಕಾರ, ಈತನನ್ನು ಪ್ರಭಾವಿಗಳು ಬಳಸಿಕೊಂಡು ಬಿಟ್ ಕಾಯಿನ್ ನಲ್ಲಿ ತಮ್ಮ ಸಾವಿರಾರು ಕೋಟಿ ಅಕ್ರಮ ಸಂಪತ್ತನ್ನು ಹೂಡಿದ್ದಾರೆ. ತಮ್ಮ ಮೇಲಿನ ತಪ್ಪನ್ನು ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಮೇಲೆ ಹೊರಿಸಿ ಇವರುಗಳು ತಪ್ಪಿಸಿಕೊಳ್ಳಲು ಮಾಡಿರುವ ಹುನ್ನಾರವಿದು. ಇಷ್ಟು ದೊಡ್ಡ ಹಗರಣದಿಂದ ಪಾರಾಗಲು ಶ್ರೀಕೃಷ್ಣನಿಗೆ ಮಾದಕ ದ್ರವ್ಯಗಳನ್ನು ನೀಡುವ ಮೂಲಕ ಆತನನ್ನು ಬಲಿಪಶು ಮಾಡಿದ್ದಾರೆ. ಈತನಿಂದ ಈ ಕೆಲಸಗಳನ್ನು ಮಾಡಿಸಿದವರ ವಿವರ ಬಹಿರಂಗಗೊಳ್ಳಬೇಕು ಎಂದು ಅಬ್ದುಲ್ ಮಜೀದ್ ಆಗ್ರಹಿಸಿದರು.
ಈ ಹಿಂದೆ ಐಪಿಎಲ್ ಹಗರಣದಲ್ಲಿ ಸಿಕ್ಕಿಬಿದ್ದಾಗ ಪ್ರಸಿದ್ಧ್ ಶೆಟ್ಟಿ ಎಂಬಾತ ತನಗೆ ಜಾಮೀನು ಕೊಡಿಸಿದ್ದ ಎಂದು ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾನೆ. ಈ ಪ್ರಸಿದ್ಧ್ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತ ಎಂದು ಸಚಿನ್ ಮಿಯಾಮಿ ಎಂಬಾತ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾನೆ. ಇನ್ನೂ ಈ ಹಗರಣದಲ್ಲಿ ಶ್ರೀಕೃಷ್ಣ ಬಿಟ್ ಕಾಯಿನ್ ಹ್ಯಾಕ್ ಮಾಡಿರುವುದಾ ಅಥವಾ ಶ್ರೀಕೃಷ್ಣನ ಮೂಲಕ ಪ್ರಮುಖ ರಾಜಕಾರಣಿಗಳು ತಮ್ಮ ಲೆಕ್ಕವಿಲ್ಲದ ಹಣವನ್ನು ಹೂಡಿಕೆ ಮಾಡಿರುವುದಾ ಎಂಬ ಕುರಿತು ತನಿಖೆ ನಡೆಯಬೇಕು.
ಬಿಟ್ ಕಾಯಿನ್ ಹಗರಣದ ಆರೋಪಿ ಹ್ಯಾಕರ್ ಶ್ರೀಕೃಷ್ಣನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಆಪ್ತ ಜಾಮೀನು ಕೊಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ತಕ್ಷಣವೇ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಕಾಂಗ್ರೆಸ್, ಬಿಜೆಪಿ ಯಾವ ಪಕ್ಷದವರೇ ಆಗಲಿ ಹಗರಣದಲ್ಲಿ ಭಾಗಿಯಾಗಿದ್ದವರ ಹೆಸರು ಬಹಿರಂಗಗೊಳಿಸಬೇಕು. ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ಉನ್ನತ ಐಪಿಎಸ್ ಅಧಿಕಾರಿಯೊಬ್ಬರ ಅಳಿಯನ ಹೆಸರೂ ಈ ಹಗರಣದಲ್ಲಿ ಕೇಳಿ ಬಂದಿದೆ.
ಹಾಗಾಗಿ, ಪೊಲೀಸ್ ತನಿಖೆಯಿಂದ ಸತ್ಯ ಗೊತ್ತಾಗುವುದು ಕಷ್ಟ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಅಧ್ಯಕ್ಷರೇ ಆರೋಪಿ ಕುರಿತು ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಹಗರಣವನ್ನು ಆದಷ್ಟು ಬೇಗ ತನಿಖೆಗೊಳಪಡಿಸುವ ಮೂಲಕ ದೇಶದ ಪ್ರಜೆಗಳಿಗೆ ಸತ್ಯಾಂಶ ತಿಳಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.