ಮಂಗಳೂರು: ಕೇಂದ್ರ ಸರಕಾರವು ಅಡುಗೆ ಅನಿಲ ಬೆಲೆಯನ್ನು ನಿರಂತರವಾಗಿ ಏರಿಸಿರುವುದನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ, ದಕ್ಷಿಣ ಕನ್ನಡ ಜಿಲ್ಲಾದ್ಯಂತ 10 ದಿನಗಳ ಕಾಲ ಪ್ರತಿಭಟನೆಗೆ ಕರೆ ನೀಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಈಗಾಗಲೇ ಕೊರೊನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್ ಡೌನ್ ನಿಂದ ತತ್ತರಿಸಿರುವ ಜನಸಾಮಾನ್ಯರ ಬದುಕನ್ನು ಕೇಂದ್ರ ಸರಕಾರವು ಅಗತ್ಯ ವಸ್ತು ಬೆಲೆ ಏರಿಕೆ ಮಾಡುವ ಮೂಲಕ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಬಡ ಜನತೆಯ ನೋವು ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರವು ಭಾವನಾತ್ಮಕ ವಿಚಾರಗಳನ್ನು ಎತ್ತಿಕೊಂಡು ತನ್ನ ಮತ ಬ್ಯಾಂಕನ್ನು ಭದ್ರಪಡಿಸಿಕೊಂಡು ಕಾರ್ಪೊರೇಟ್ ವಿಭಾಗಗಳಿಗೆ ಬೇಕಾಗಿ ಆಡಳಿತ ನಡೆಸುತ್ತಿದೆ. ಇದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಕೇಂದ್ರದ ಈ ನೀತಿಯ ವಿರುದ್ದ ದ.ಕ ಜಿಲ್ಲಾದ್ಯಂತ ಇಂದಿನಿಂದ ಹತ್ತು ದಿನಗಳ ಕಾಲ ಹಳ್ಳಿ, ಗ್ರಾಮ, ಹೋಬಳಿ ಮಟ್ಟದಲ್ಲಿ ವಿನೂತನ ರೀತಿಯ ಪ್ರತಿಭಟನೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.