ಹಾಸನ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷದಿಂದ ಅಭ್ಯರ್ಥಿಯನ್ನು ಹಾಸನ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲಾಗುವುದು ಹಾಗೂ ಪಕ್ಷವನ್ನು ಹಾಸನದ ಹಲವು ವಾರ್ಡ್ ಗಳಲ್ಲಿ ಬಲ ಪಡಿಸಲಾಗುವುದು ಎಂದು ಎಸ್.ಡಿ.ಪಿ.ಐ. ಜಿಲ್ಲಾ ಪ್ರಧಾನಕಾರ್ಯದರ್ಶಿ ಸೈಯದ್ ಫರೀದ್ ಹೇಳಿದರು.
ನಗರದ ಪೆನ್ಷನ್ ಮೊಹಲ್ಲಾ 18ನೇ ವಾರ್ಡ್ ನಲ್ಲಿರುವ ಡಿಎಸ್ ಎಂ ಹಾಲ್ ನಲ್ಲಿ ಎಸ್ಡಿಪಿಐ ಉಸ್ತುವಾರಿ ಫೈರೋಜ್ ಪಾಷಾ ಅವರ ನೇತೃತ್ವದಲ್ಲಿ ನಡೆದ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೈಯದ್ ಫರೀದ್, ಇತ್ತೀಚಿಗೆ ಬಿಜೆಪಿಯನ್ನು ಜನರು ತಿರಸ್ಕರಿಸುತ್ತಿದ್ದು, ಇತ್ತೀಚಿಗೆ ನಡೆದ ದಕ್ಷಿಣ ಪದವೀಧರ ಕ್ಷೆತ್ರದ ಚುನಾವಣೆಯಲ್ಲಿ ಪ್ರಜ್ಞಾವಂತ ಪದವೀಧರರು ಬಿಜೆಪಿಯನ್ನು ಸೋಲಿಸಿ ಇತಿಹಾಸ ಬರೆದಿದ್ದಾರೆ. ಮುಂದೆಯೂ ಹಾಸನ ಕ್ಷೇತ್ರದಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸಿ ಸೋಲಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಸ್ಪರ್ಧೆ ಮಾಡಲಿದೆ. ಅದಕ್ಕೆ ಪೂರಕವಾಗಿ ಎಲ್ಲಾ ವಾರ್ಡ್ ನಲ್ಲಿ ಎಸ್ಡಿಪಿಐ ಅನ್ನು ಬಲಪಡಿಸಬೇಕು ಎಂದರು.
ವಾರ್ಡ್ ಉಸ್ತುವಾರಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ಫೈರೋಜ್ ಪಾಷಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಇತ್ತೀಚಿಗೆ ನಗರಸಭಾ ಸದಸ್ಯರು ವಾರ್ಡ್ಗಳತ್ತ ತಿರುಗಿ ಸಹ ನೋಡುತ್ತಿಲ್ಲ. ಜನರಿಗೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ವಾರ್ಡ್ ಒಳಗೆ ಬರುತ್ತಾರೆ. ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಇತ್ತೀಚಿಗೆ ಅಮೃತ ಯೋಜನೆಯಡಿಯಲ್ಲಿ ವಾರ್ಡಗಳಲ್ಲಿನ ಕಾಮಗಾರಿ ಮುಗಿದಿದ್ದರೂ ರಸ್ತೆಗಳನ್ನು ಸರಿಪಡಿಸಲು ಇನ್ನೂ ಆಗಿಲ್ಲ. ಜನರು ಬೇಸತ್ತು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. 18ನೇ ವಾರ್ಡ್ ನಪರಿಸ್ಥಿತಿಯ ಬಗ್ಗೆ ತಿರುಗಿ ನೋಡುತ್ತಿಲ್ಲ. ವಾರ್ಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್ಡಿಪಿಐ ಪಕ್ಷವನ್ನು ಸೇರಿ ಬಳಪಡಿಸಬೇಕು ಮತ್ತು ಮುಂಬರುವ ಚುನಾವಣೆಗಳಲ್ಲಿ ಎಸ್ಡಿಪಿಐ ಪಕ್ಷವನ್ನು 10 ವಾರ್ಡ್ ಗಳಲ್ಲಿ ನಗರಸಭೆಗೆ ಆಯ್ಕೆ ಮಾಡಿ ಕಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಹಾಸನ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸರ್ದಾರ್, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ನದಿಮ್, ಖಾಝೀಮ್ ಮತ್ತು ಅಮನುಲ್ಲಾ ಇತರರು ಉಪಸ್ಥಿತರಿದ್ದರು.