ಮಂಗಳೂರು : ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಸೌಹಾರ್ಧತೆಯನ್ನು ಕದಡುವಂತಹ ಘಟನಾವಳಿಗಳು ನಡೆಯುತ್ತಿವೆ. ಅದಕ್ಕೆ ಸೇರ್ಪಡೆ ಎಂಬಂತೆ, ಉಳ್ಳಾಲ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿರುವುದು, ಕೊಣಾಜೆ ಗೋಪಾಲಕೃಷ್ಣ ಮಂದಿರದಲ್ಲಿ ಭಗವಾಧ್ವಜಕ್ಕೆ ಮೂತ್ರ ವಿಸರ್ಜನೆ ಮಾಡಿರುವುದು, ಮಂದಿರದ ಅಂಗಳವನ್ನು ಮಲ ಮೂತ್ರಗೈದು ವಿಕೃತಿ ಮೆರೆದಿರುವಂತಹ ಹಲವಾರು ಘಟನೆಗಳು ನಡೆದಿವೆ. ಈ ಎಲ್ಲಾ ಘಟನೆಗಳನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದ್ದಾರೆ.
ಈ ಎಲ್ಲಾ ಘಟನೆಗಳನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು, ಈ ವಿಕೃತಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಲವು ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ವಿಕೃತಿಯನ್ನು ಮೆರೆದು ಪರಸ್ಪರ ಕೋಮು ದ್ವೇಷವನ್ನು ಮತ್ತು ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಜಿಲ್ಲೆಯ ಶಾಂತಿ ಸೌಹಾರ್ಧತೆಯನ್ನು ಕದಡಿಸುವ ಷಡ್ಯಂತ್ರದ ಭಾಗವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಚಾಮರಾಜನಗರದಲ್ಲಿ ದೇವಸ್ಥಾನಕ್ಕೆ ಹಂದಿ ಮಾಂಸ ಎಸೆದು ಅದನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟುವ ಪ್ರಯತ್ನ ಮಾಡಲಾಗಿತ್ತು. ಅಲ್ಲಿಯ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿದುದರಿಂದ ನೈಜ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು.
ಇಂತಹ ಘಟನೆಗಳಿಗೆ ಕೋಮು ಸೂಕ್ಷ್ಮ ಪ್ರದೇಶವಾದ ದ.ಕ. ಜಿಲ್ಲೆಯಲ್ಲಿ ಆಸ್ಪದ ಕೊಡದೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಮಂದಿರಗಳಲ್ಲಿ ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.