ರಾಜ್ಯದ ಲವ್ ಜಿಹಾದ್ ಕಾಯ್ದೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ : ಗುಜರಾತ್ SDPI ಆರೋಪ

Prasthutha|

ಗುಜರಾತ್ : ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003ರ ತಿದ್ದುಪಡಿ ಮಸೂದೆಗೆ ಗುಜರಾತ್ ಶಾಸನ ಸಭೆ ಅಂಗೀಕಾರ ನೀಡಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗುಜರಾತ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದ್ದು, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ನಿರಾಕರಿಸುತ್ತಿರುವುದಕ್ಕೆ ಅದು ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಸ್ ಡಿಪಿಐ ಗುಜರಾತ್ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಇರ್ಶಾದ್ ಲೀಲ್ ಗಾರ್, ಭಾರತೀಯ ಸಂವಿಧಾನದ 25ರಿಂದ 28ರವರೆಗಿನ ಪರಿಚ್ಛೇದ ನಮ್ಮ ದೇಶದ ಪ್ರತಿ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಲಾಗಿದೆ. ಆದಾಗ್ಯೂ, ಗುಜರಾತ್ ಬಿಜೆಪಿ ಸರ್ಕಾರ, ಲವ್ ಜಿಹಾದ್ ನ ನೆಪದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಕಿರುಕುಳ ನೀಡಲು ಮತ್ತು ಅವರನ್ನು ಬಂಧಿಸಲು ಈ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ ಎಂದು ಆರೋಪಿಸಿದ್ದಾರೆ.

ದೇಶದ ಯಾವುದೇ ಭಾಗದಲ್ಲೂ ಲವ್ ಜಿಹಾದ್ ನಡೆದ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರೀಯ ತನಿಖಾ ಸಂಸ್ಥೆಗಳು ತಿಳಿಸಿವೆ ಎಂದು 2020, ಫೆಬ್ರವರಿ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ‘ಲವ್ ಜಿಹಾದ್ ಮಸೂದೆ’ ಎಂದು ಕರೆಯಲ್ಪಡುವ ಮಸೂದೆಯನ್ನು ಹಿಂದುತ್ವ ಮತಗಳನ್ನು ಕೋಮುವಾದೀಕರಿಸಲು ಮತ್ತು ಧ್ರುವೀಕರಿಸಲು ಈ ರೀತಿಯ ವಂಚನೆಯ ಮಾರ್ಗದ ಮೂಲಕ ಬಿಜೆಪಿ ದೇಶದ ದಾರಿ ತಪ್ಪಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

 ‘ಹಿಂದೂ ಹುಡುಗಿಯರಿಗೆ ಆಮಿಷ ಒಡ್ಡಲು ಮತ್ತು ಅವರನ್ನು ಮತಾಂತರ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗುಜರಾತ್ ನ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರ ಹೇಳಿಕೆಯಿಂದ ಆಶ್ಚರ್ಯಗೊಂಡಿದ್ದೇನೆ. ಮಂತ್ರಿಯೊಬ್ಬರು ಇಂತಹ ಸುಳ್ಳುಗಳನ್ನು ಯಾವುದೇ ಪುರಾವೆಗಳಿಲ್ಲದೆ ಹೇಗೆ ಹೇಳುತ್ತಾರೆ ? ಮತ್ತು ಜನರಲ್ಲಿ ಅಪನಂಬಿಕೆ ಮತ್ತು ದುರುದ್ದೇಶವನ್ನು ಹರಡುತ್ತಾರೆ ? ಎಂದು ಇರ್ಷಾದ್ ಪ್ರಶ್ನಿಸಿದ್ದಾರೆ. ‘ಲವ್ ಜಿಹಾದ್ ಕಾಯ್ದೆ’ (ಧಾರ್ಮಿಕ ಸ್ವಾತಂತ್ರ್ಯ ತಿದ್ದುಪಡಿ ಕಾಯ್ದೆ) ಮೂಲಭೂತ ಹಕ್ಕುಗಳ ನಿರಾಕರಣೆ, ಭಾರತೀಯ ಸಂವಿಧಾನದ ಮೇಲೆ ನೇರ ದಾಳಿ ಮತ್ತು ಮತ ರಾಜಕೀಯದ ಉದ್ದೇಶಕ್ಕಾಗಿ ಜನರನ್ನು ಧರ್ಮದ ಮೇಲೆ ವಿಭಜಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ ಎಂದು ಇರ್ಷಾದ್ ಲೀಲ್ ಗಾರ್ ತಿಳಿಸಿದ್ದಾರೆ.

Join Whatsapp