ಬಿಜೆಪಿಯ ದ್ವೇಷ, ದುರಾಡಳಿತದ ವಿರುದ್ಧ 5 ನಗರಗಳಲ್ಲಿ SDPIನಿಂದ ಜನಾಧಿಕಾರ ಸಮಾವೇಶ

Prasthutha|

►ಮೇ 27 ರಂದು ಮಂಗಳೂರಿನ ಕಣ್ಣೂರಿನಲ್ಲಿ ಬೃಹತ್ ಸಮಾವೇಶ

- Advertisement -

ಮಂಗಳೂರು: ಬಿಜೆಪಿಯ ದ್ವೇಷ ಮತ್ತು ದುರಾಡಳಿತದ ವಿರುದ್ಧ ರಾಜ್ಯದ ಜನ ರೋಸಿ ಹೋಗಿದ್ದಾರೆ. ಜನರು ಪರ್ಯಾಯ ರಾಜಕಾರಣದ ನಿರೀಕ್ಷೆಯಲ್ಲಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಶಕ್ತವಾಗಿ ಎದುರಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐಗೆ ಮಾತ್ರ ಸಾಧ್ಯ ಎಂಬ ವಾಸ್ತವವನ್ನು ಜನರಿಗೆ ಮನದಟ್ಟು ಮಾಡಿ ಕೊಡುವ ಉದ್ದೇಶದಿಂದ ರಾಜ್ಯದ ಐದು ಕಡೆಗಳಲ್ಲಿ ಜನಾಧಿಕಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು SDPI ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಇಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮಸ್ಯೆಗಳಿಗೆ ಜನ ಪರಿಹಾರ ಹುಡುಕುತ್ತಿದ್ದಾರೆ. ಎಸ್ ಡಿಪಿಐಯಿಂದ ಮಾತ್ರ ಪರ್ಯಾಯ ರಾಜಕಾರಣ ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಜ್ಯದ ಮಂಗಳೂರು, ಬೆಂಗಳೂರು, ಮೈಸೂರು, ಗುಲ್ಬರ್ಗ, ದಾವಣಗೆರೆಯಲ್ಲಿ ಜನಾಧಿಕಾರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಮಂಗಳೂರಿನ ಹೊರ ವಲಯದ ಕಣ್ಣೂರಿನಲ್ಲಿ ಪಕ್ಷದ ಜಿಲ್ಲಾ ಸಮಿತಿಯು ಮೇ 27 ರಂದು ಮಧ್ಯಾಹ್ನ 2.30ಕ್ಕೆ ಜನಾಧಿಕಾರ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಸಮಾವೇಶದಲ್ಲಿ ಪ್ರಗತಿಪರ ಹೋರಾಟಗಾರರು, ಚಿಂತಕರು, ಪಕ್ಷದ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತಗಳಿಲ್ಲದ ಕಾರಣ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರವು ಆಡಳಿತದ ಚುಕ್ಕಾಣಿ ಹಿಡಿಯಿತು. ಆದರೆ ಬಿಜೆಪಿ ಜನಾಭಿಮತವನ್ನು ಧಿಕ್ಕರಿಸಿ ಹಿಂಬಾಗಿಲ ಮೂಲಕ ಇತರೆ ಪಕ್ಷಗಳ ಶಾಸಕರನ್ನು ಖರೀದಿಸುವ ಮೂಲಕ ಅಧಿಕಾರಕ್ಕೇರಿದೆ. ಬಿಜೆಪಿ ಸರ್ಕಾರ ರಾಜ್ಯ ಕಂಡ ಅತ್ಯಂತ ದ್ವೇಷ ಮತ್ತು ಕೆಟ್ಟ ಆಡಳಿತವನ್ನು ನೀಡುತ್ತಿದ್ದು, ಇದರಿಂದ ರಾಜ್ಯದ ಜನರ ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ನಿರಂತರವಾಗಿ ಹಗರಣಗಳು ರಾಜಾರೋಷವಾಗಿ ನಡೆಯುತ್ತಿವೆ. ಸರ್ಕಾರಿ ಗುತ್ತಿಗೆಯಲ್ಲಿ 40% ಕಮಿಷನ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ ಎಂದು ಸ್ವಯಂ ಗುತ್ತಿಗೆದಾರರೇ ಹೇಳಿಕೊಂಡಿದ್ದಾರೆ. ಗುತ್ತಿಗೆದಾರರ ಜೀವಗಳೂ ಬಲಿಯಾಗಿವೆ. ಹಣ ಕೊಡದೆ ಯಾವುದೇ ಕೆಲಸ ಕೂಡ ನಡೆಯುತ್ತಿಲ್ಲ. ಸರ್ಕಾರಿ ಉದ್ಯೋಗದ ಆಕ್ಷಾಂಕ್ಷಿಗಳಿಗೆ ವಿದ್ಯೆ ಮತ್ತು ಕೌಶಲ್ಯಕ್ಕಿಂತ ಹೆಚ್ಚಾಗಿ ಲಕ್ಷ ಲಕ್ಷ ಹಣದೊಂದಿಗೆ ಸರ್ಕಾರಿ ಉದ್ಯೋಗ ಪೂರೈಸಲಾಗುತ್ತಿದೆ. ಲಂಚದ ಮೂಲಕ ಸರ್ಕಾರಿ ಉದ್ಯೋಗಕ್ಕೆ ಬರುವ ವ್ಯಕ್ತಿಗಳು ಸಾಮಾನ್ಯ ಜನರನ್ನು ಲೂಟಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಜನಸಾಮಾನ್ಯರ ಯಾವೊಂದು ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದ ಈ ಸರ್ಕಾರ, ಹಿಂದೂ-ಮುಸ್ಲಿಮ್- ಕ್ರೈಸ್ತರೆಂಬ ಧಾರ್ಮಿಕ ವಿಭಜನೆಗಳನ್ನು ಮಾಡಿಸಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವುದು ದುರಂತ. ಯುವಕರಲ್ಲಿ ಹಿಂದುತ್ವವೆಂಬ ಅಮಲನ್ನು ತುಂಬಿಸಿ ಸಹಬಾಳ್ವೆಯಿಂದ ಬದುಕುತ್ತಿದ್ದ ಜನರನ್ನು ಪರಸ್ಪರ ದ್ವೇಷಿಸುವಂತೆ ಮಾಡುವ ಚುನಾವಣಾ ಅಜೆಂಡಾ ಬಿಜೆಪಿಯ ದ್ವೇಷ ರಾಜಕೀಯವನ್ನು ಎತ್ತಿ ತೋರಿಸುತ್ತಿದೆ. ಮುಸ್ಲಿಮ್ ವ್ಯಾಪಾರ ಬಹಿಷ್ಕಾರ, ಮುಸ್ಲಿಮ್ ವಿದ್ಯಾರ್ಥಿನಿಯರ ತಲೆವಸ್ತ್ರವನ್ನು ವಿವಾದ ಮಾಡಿದ್ದು, ಗೋಹತ್ಯೆ ತಡೆ ಕಾಯ್ದೆ, ಆಝಾನ್ ಕರೆ ತಡೆ, ಕ್ರೈಸ್ತರ ಪಾದ್ರಿಗಳ ಮೇಲೆ ದಾಳಿ ಹೀಗೆ ದಿನಕ್ಕೊಂದು ವಿವಾದಗಳು ಮುನ್ನೆಲೆಗೆ ಬರುತ್ತಿವೆ. ವೇದಿಕೆಗಳಲ್ಲಿ ನಾಯಕರೆನಿಸಿಕೊಂಡವರ ಮಾತುಗಳಲ್ಲಿ ಕೇವಲ ದ್ವೇಷವೇ ತುಂಬಿರುತ್ತವೆ. ಇದು ರಾಜ್ಯದ ಸ್ವಾಸ್ಥ್ಯವನ್ನು ಕೆಡಿಸಿ ಕೋಮುಗಲಭೆಗಳಿಗೆ ಕಾರಣವಾಗುತ್ತಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಶಾಲೆಯೊಂದರಲ್ಲಿ ನಡೆದ ಶಸ್ತ್ರಾಸ್ತ್ರ ಭಯೋತ್ಪಾದನಾ ತರಬೇತಿ ರಾಜ್ಯವನ್ನು ಭಯಭೀತಿಗೊಳಿಸಿದೆ ಎಂದು ಅಥಾವುಲ್ಲಾ ಜೋಕಟ್ಟೆ ವಿವರಿಸಿದ್ದಾರೆ.
ದ್ವೇಷ ರಾಜಕೀಯದ ಜೊತೆಜೊತೆಗೆ ಬಡವರ ಆಹಾರಕ್ಕೆ ಅಡ್ಡೆಗೋಡೆ ಇಟ್ಟು ಜನಜೀವನವೇ ಅಸ್ತವ್ಯಸ್ತಗೊಳಿಸಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ದಿನಬಳಕೆ – ವಸ್ತು ಅಡುಗೆ ಅನಿಲ ಹೀಗೆ ಎಲ್ಲದರ ಬೆಲೆ ಏರುತ್ತಿರುವುದು ಮತ್ತಷ್ಟು ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ. ಆಹಾರದ ಕೊರತೆ ಮತ್ತು ಅಪೌಷ್ಟಿಕತೆಯ ಕೊರತೆಯಿಂದ ಬಳಲುವ ಮತ್ತು ಸಾಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರಂತವೇ ಸರಿ ಎಂದು ತಿಳಿಸಿದ್ದಾರೆ.
ರಾಜ್ಯವನ್ನು ಅರಾಜಕತೆಗೆ ತಳ್ಳುತ್ತಿರುವ ಬಿಜೆಪಿ ಸರ್ಕಾರವನ್ನು ವಿರೋಧಿಸಬೇಕಾದ ವಿರೋಧ ಪಕ್ಷಗಳು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಬಿಜೆಪಿಯ ಅಕ್ರಮಕ್ಕೆ ಪರೋಕ್ಷ ಬೆಂಬಲವಾಗುತ್ತಿದೆ. ಕಾಂಗ್ರೆಸ್ ನಲ್ಲಿರುವ ಒಳಜಗಳ, ಮೃದು ಹಿಂದುತ್ವ, ಜೆಡಿಎಸ್ – ಕಾಂಗ್ರೆಸ್ ನಡುವಿನ ಕಚ್ಚಾಟ, ಬಿಜೆಪಿಗೆ ತಮ್ಮ ಪಕ್ಷದಿಂದ ನಿರಂತರವಾಗಿ ಬಿಜೆಪಿಗೆ ಹೋಗುತ್ತಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾದರೆ ನಿಷ್ಕ್ರಿಯ ಮತ್ತು ದಿವಾಳಿಯಾಗಿದೆ. ಮಾಧ್ಯಮಗಳು ಸಂಘಪರಿವಾರದ ಅಣತಿಯಂತೆ ಕೆಲಸ ಮಾಡುತ್ತಿರುವುದು ಬಿಜೆಪಿಯ ಅರಾಜಕತೆಯ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಿ ದ್ವೇಷ ಮತ್ತು ಹಗರಣದ ರಾಜಕೀಯಕ್ಕೆ ಕೈಜೋಡಿಸುತ್ತಿವೆ ಎಂದು ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ SDPI ದ.ಕ. ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್, ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ ಉಪಸ್ಥಿತರಿದ್ದರು.



Join Whatsapp