ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್’ಡಿಪಿಐ) ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪಕ್ಷಕಾರರನ್ನಾಗಿಸಲು ಅರ್ಜಿದಾರರಿಗೆ ಸೂಚಿಸಿರುವ ನ್ಯಾಯಾಲಯವು ಭಾರತ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.
ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾಗಿರುವ ಸೀಲ್ (ಮೊಹರು) ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಎಸ್ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ದಾವೆಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ಅರ್ಜಿದಾರರು ಕೋರಿರುವುದಕ್ಕೆ ಅನುಮತಿಸಲಾಗಿದ್ದು, ಅರ್ಜಿಯಲ್ಲಿ ತಿದ್ದುಪಡಿ ಮಾಡಲು ನಿರ್ದೇಶಿಸಲಾಗಿದೆ. ಭಾರತ ಸರ್ಕಾರವನ್ನು ಪ್ರತಿನಿಧಿಸಿರುವ ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರಿಗೆ ನೋಟಿಸ್ ಪಡೆಯಲು ನಿರ್ದೇಶಿಸಲಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಹೆಚ್ಚುವರಿ ಸರ್ಕಾರಿ ವಕೀಲರು ಮತ್ತು ಉಪ ಸಾಲಿಸಿಟರ್ ಜನರಲ್ ಅವರಿಗೆ ತಿದ್ದುಪಡಿ ಮಾಡಿದ ಅರ್ಜಿಯ ಪ್ರತಿ ಒದಗಿಸಲು ಅರ್ಜಿದಾರರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಹೆಚ್ಚುವರಿ ಸರ್ಕಾರದ ವಕೀಲರು ಸಲ್ಲಿಸಿರುವ ಆಕ್ಷೇಪಣೆಯನ್ನು ಸ್ವೀಕರಿಸಲಾಗಿದೆ ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ಪ್ರಜಾ ಪ್ರತಿನಿಧಿ ಕಾಯಿದೆ 1951ರ ಅಡಿ ಎಸ್’ಡಿಪಿಐ ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದೇವೆ. ಇದರಿಂದ ಅರ್ಜಿದಾರರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದ್ದು, ನಮ್ಮ ಕೆಲಸಕ್ಕೆ ಅಡ್ಡಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಎಸ್’ಡಿಪಿಐ ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಅರ್ಜಿದಾರ ಪಕ್ಷವನ್ನು ನಿಷೇಧ ಮಾಡಲಾಗಿಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಜೊತೆ ಎಸ್ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್’ಐ ಮತ್ತು ಅದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ಎಸ್’ಡಿಪಿಐ ಹೆಸರು ಸೇರಿಸಿಲ್ಲ. ಅದಾಗ್ಯೂ, ಸರ್ಕಾರಿ ಅಧಿಕಾರಿಗಳು/ಪ್ರತಿವಾದಿಗಳು, ಎಸ್ಡಿಪಿಐಗೆ ಸೇರಿದ ಸ್ಥಳಗಳಲ್ಲಿ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ. ಎಸ್ಡಿಪಿಐಗೆ ಸೇರಿದ ಕಚೇರಿಗಳನ್ನು ಮುಚ್ಚಿರುವುದನ್ನು ತೆರವು ಮಾಡುವಂತೆ ಪ್ರತಿವಾದಿಗಳಿಗೆ ಎಸ್ಡಿಪಿಐ 2022ರ ಅಕ್ಟೋಬರ್ 29ರಂದು ಮನವಿ ಸಲ್ಲಿಸಿದೆ ಎಂದು ವಿವರಿಸಲಾಗಿದೆ.
ಪ್ರಕರಣದ ಹಿನ್ನೆಲೆ: 2022ರ ಸೆಪ್ಟೆಂಬರ್ 28ರಂದು ಕೇಂದ್ರ ಗೃಹ ಇಲಾಖೆಯು ಐದು ವರ್ಷಗಳ ಅವಧಿಗೆ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ಗಳು, ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಪೊಲೀಸರ ಜೊತೆಗೂಡಿ ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಹಾಗೂ ದಕ್ಷಿಣ ಕನ್ನಡದ ಎಸ್’ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ಜಫ್ತಿ ಮಾಡಿದ್ದರು. ಜಪ್ತಿ ಮಾಡಿರುವ ಕಚೇರಿಗಳನ್ನು ತೆರವು ಮಾಡುವಂತೆ ಎಸ್’ಡಿಪಿಐ ಪ್ರತಿವಾದಿಗಳಿಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿವಾದಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಎಸ್’ಡಿಪಿಐ ಹೈಕೋರ್ಟ್ ಕದ ತಟ್ಟಿದೆ.
(ಕೃಪೆ: ಬಾರ್ & ಬೆಂಚ್)