SDPI ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ

Prasthutha|

ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಭೆಯು 04.07.2023 ರಂದು ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆಯಿತು.

- Advertisement -

ಈ ಸಂದರ್ಭದಲ್ಲಿ ರಾಷ್ಟೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರ್ಯಾಂಕೋ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ನಂಜಯ್ಯ,ಪ್ರಧಾನ ಕಾರ್ಯದರ್ಶಿಗಳಾದ ಅಫ್ಸರ್ ಕೊಡ್ಲಿಪೇಟೆ, BR ಭಾಸ್ಕರ್ ಪ್ರಸಾದ್, ಅಬ್ದುಲ್ ಲತೀಫ್ ಪುತ್ತೂರು, ರಾಷ್ಟೀಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮಜೀದ್, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮತ್ತು ರಾಜ್ಯ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

 ಸಭೆಯಲ್ಲಿ ಕೈಗೊಂಡ ನಿರ್ಣಯಗಳು.

- Advertisement -

1. ಕಾಂತರಾಜು ಆಯೋಗದ ವರದಿ ಸಾರ್ವಜನಿಕಗೊಳಿಸಿ

    ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಹೆಚ್. ಕಾಂತರಾಜು ಅವರ ನೇತೃತ್ವದಲ್ಲಿ ಜಾತಿಗಣತಿಗೆ ಆಯೋಗವನ್ನು ರಚಿಸಲಾಗಿತ್ತು. ಆ ಆಯೋಗ ನೀಡಿದ ವರದಿಯನ್ನು ಇಲ್ಲಿಯವರೆಗೂ ಬಹಿರಂಗಗೊಳಿಸಿಲ್ಲ. ಈ ವರದಿಯಲ್ಲಿ ಕರ್ನಾಟಕದ ಜಾತಿವಾರು ಜನಸಂಖ್ಯೆಯ ಅಂಕಿ ಅಂಶಗಳು ಮತ್ತು ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ವಿಸ್ತೃತ ಅಂಕಿ ಅಂಶಗಳಿವೆ. ಈ ವರಿದಿಯನ್ನು ತಕ್ಷಣ ಸಾರ್ವಜನಿಕಗೊಳಿಸಬೇಕು. ಮತ್ತು ಅದರಲ್ಲಿನ ಶಿಫಾರಸುಗಳ ಆಧಾರದ ಮೇಲೆ ಸಾಮಾಜಿಕ ಸುಧಾರಣೆ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

2. ಖಾಲಿ ಇರುವ ಸರ್ಕಾರಿ ಹುದ್ದೆಗಳು ಮತ್ತು ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಿ

ದೇಶ ಇಂದು ತೀವ್ರ ನಿರುದ್ಯೋಗ ಸಮಸ್ಯೆಯಿಂದ ತತ್ತರಿಸುತ್ತಿದೆ. ಯುವ ಸಮೂಹ ಉದ್ಯೋಗ ಕಾಣದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷ ಉದ್ಯೋಗಗಳು ಖಾಲಿ ಉಳಿದಿವೆ. ಈ ಎಲ್ಲಾ ಹುದ್ದೆಗಳನ್ನು ಸರ್ಕಾರ ತಕ್ಷಣ ಭರ್ತಿ ಮಾಡಬೇಕು ಜೊತೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ಸಹ ಸಂಪೂರ್ಣವಾಗಿ ಭರ್ತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

3. ಖಾಸಗಿ ವಲಯದಲ್ಲಿ ಮೀಸಲಾತಿ ಘೋಷಿಸಿ

ಸರ್ಕಾರಿ ಸೌಮ್ಯದ ಸಂಸ್ಥೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಅವಕಾಶವಂವಹಿತ ಸಮುದಾಯಗಳಿಗೆ ಅವಕಾಶ ಸೃಷ್ಟಿಸಲು ಅಸ್ತಿತ್ವದಲ್ಲಿರುವ ಮೀಸಲಾತಿ ತನ್ನ ವ್ಯಾಪ್ತಿಯನ್ನು ಬಹಳ ವೇಗವಾಗಿ ಕಳೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಅವಕಾಶ ವಂಚಿತ ಸಮುದಾಯಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರುವ ಮೂಲಕ ಅದನ್ನು ಸರಿದೂಗಿಸಬಹುದಾಗಿದೆ. ಹಾಗಾಗಿ ಸರ್ಕಾರಗಳು ತಕ್ಷಣ ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂಬ ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

4. ಸಾಮಾಜಿಕ ಅಸಮಾನತೆಯ ಕಾರಣಕ್ಕೆ ಆರ್ಥಿಕವಾಗಿ ಹಿಂದುಳಿದು ದಶಕಗಳಿಂದ ಸರ್ಕಾರಿ ಜಾಗದಲ್ಲಿ ವಾಸವಾಗಿರುವ ಜಾಗ ಅಥವಾ ಕೃಷಿ ಚಟುವಟಿಕೆ ನಡೆಸಿಕೊಂಡು ಬಂದಿರುವ ಭೂಮಿಗಳಿಗೆ ಸಂಬಂಧಪಟ್ಟ ಹಾಗೆ ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿರುವ ಭೂ ವಂಚಿತರ ಮನವಿಗೆ ಸರ್ಕಾರ ಸ್ಪಂದಿಸಿ ಅವರಿಗೆ ಆ ಜಮೀನಿನ ಹಕ್ಕು ಪತ್ರಗಳನ್ನು ತಕ್ಷಣವೇ ನೀಡಬೇಕೆಂದು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

5. ರಾಜ್ಯದಲ್ಲಿ ನಿರಂತರ ದೌರ್ಜನ್ಯಕ್ಕೆ ಕಡಿವಾಣ ಹಾಕಿ

ಕಾಂಗ್ರೆಸ್ ಸರ್ಕಾರ ಬಂದರೆ ಕೋಮು ದ್ವೇಷದ ಹಾಗೂ ಅನೈತಿಕ ಪೋಲಿಸ್ ಗಿರಿ ಪ್ರಕರಣಗಳನ್ನು ನಿಯಂತ್ರಿಸುವುದಾಗಿ ಹೇಳಿತ್ತು. ಆದರೆ ಹೊಸ ಸರ್ಕಾರ ಬಂದ ಮೇಲೂ ಅಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಸನದ ರಘು ಬೆದರಿಕೆ ಪ್ರಕರಣ ಇರಬಹುದು. ಬಾದಾಮಿಯಲ್ಲಿ ಬಕ್ರೀದ್ ಕುರ್ಬಾನಿ ವಿಚಾರವಾಗಿ ಯುವಕನನ್ನು ಮರಕ್ಕೆ ಕಟ್ಟಿ ಹಿಂಸಿಸಿದ ಪ್ರಕರಣ. ಸ್ವತಃ ಸ್ಪೀಕರ್ ಖಾದರ್ ಕ್ಷೇತ್ರದ ಸೋಮೇಶ್ವರ ಬೀಚ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ. ಮಂಡ್ಯ ಮರ್ಯಾದೆಗೇಡು ಹತ್ಯೆ ಪ್ರಕರಣ ಇರಬಹುದು. ಹೀಗೆ ಸಾಕಷ್ಟು ಘಟನೆಗಳು ಮುಂದುವರಿಯುತ್ತಲೇ ಇವೆ.

ನೂತನ ಸರ್ಕಾರದ ಮೊದಲ ಅಧಿವೇಶನದಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡುತ್ತಾ ರಾಜ್ಯಪಾಲರಾದ ಗೆಲ್ಲೋಟ್ ಅವರು ಕರ್ನಾಟಕದ ಮಹಾಕವಿಗಳಾದ ಶ್ರೀವಿಜಯ, ಪಂಪ ಮತ್ತು ಕುವೆಂಪುರವರನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ಆದಿಕಾಲದಿಂದಲೂ ಎಲ್ಲ ಸಮುದಾಯ, ಜಾತಿ, ಜನಾಂಗಗಳನ್ನು ಸಮನಾಗಿ ನೋಡಿಕೊಂಡು ಬರುತ್ತಿದೆ. ಅಂತಹ ಸಮಸಮಾಜವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಕರೆ ಕೊಟ್ಟಿದ್ದಾರೆ. ರಾಜ್ಯಪಾಲರೇ ಇಂತಹ ಕಳವಳ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಈ ಸರ್ಕಾರ ಕರ್ನಾಟಕದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದತೆಗೆ ಎದುರಾಗಿರುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕೆಂದು ಒತ್ತಾಯಿಸುವ  ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.



Join Whatsapp