ಮೈಸೂರು : ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ₹10,000 ಕೋಟಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು ಆದರೆ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಕೇವಲ ₹2100 ಕೋಟಿ ರೂಪಾಯಿ ನೀಡಿ ರಾಜ್ಯದ ಒಂದು ಕೋಟಿಯಷ್ಟಿರುವ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಒಟ್ಟು ಮತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ನೀಡಿದ ಪಾಲು ಶೇ.60 ರಷ್ಟು ಆದರೆ ಬಜೆಟ್‌ನಲ್ಲಿ ಈ ಎರಡು ಸಮುದಾಯಗಳಿಗೂ ಸಿದ್ದರಾಮಯ್ಯ ಮೂಗಿಗೆ ತುಪ್ಪ ಸವರಿದ್ದಾರೆಂದು ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿನಲ್ಲಿ ದಲಿತ ಮತ್ತು ಮುಸ್ಲಿಂ ಸಮುದಾಯದ ಪಾತ್ರ ದೊಡ್ಡದು. ಮುಸಲ್ಮಾನರ ಶೇ,9೦ ಹಾಗೂ ದಲಿತ ಸಮುದಾಯದ ಶೇ 5೦ ಕ್ಕೂ ಹೆಚ್ಚು ಮತಗಳು ಕಾಂಗ್ರೆಸ್ ಮಡಿಲು ಸೇರಿದ್ದವು. ಇಷ್ಟು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಈ ಎರಡು ಸಮುದಾಯಗಳಿಗೆ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನಲ್ಲಿ ಹೊಸತೇನನ್ನು ನೀಡಿಲ್ಲ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದ ವಿದ್ಯಾರ್ಥಿವೇತನ ಮರು ಚಾಲನೆ ನೀಡಿದ್ದು , ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಅನುದಾನಗಳನ್ನು ಒದಗಿಸಿದ್ದು ಅಭಿನಂದನಾರ್ಹ. ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಹೆಚ್ಚು ಹಣ ಒದಗಿಸಿಲ್ಲ. ಒಟ್ಟಾರೆ ₹2100 ಕೋಟಿ ರೂಗಳ ಅನುದಾನ ಒದಗಿಸಲಾಗಿದೆ.
ಇದು ಕರ್ನಾಟಕದ ಅಲ್ಪಸಂಖ್ಯಾತರ ಜನಸಂಖ್ಯೆಗೆ ಹೋಲಿಸಿದಾಗ ಬಹಳ ಕಡಿಮೆಯಾಗುತ್ತದೆ. ಅದೇ ರೀತಿ ದಲಿತ ಸಮುದಾಯಕ್ಕೆ ಸ್ವಉದ್ಯೋಗ ಸ್ಥಾಪಿಸಲು ಸಾರಥಿ ಯೋಜನೆಯನ್ನುಹೊರತುಪಡಿಸಿ ವಿಶೇಷವಾದ ಯಾವುದೇ ನೆರವು ನೀಡಿಲ್ಲ ಎಂದು ಅಸವಾಧಾನ ವ್ಯಕ್ತಪಡಿಸಿರುವ ಅವರು, ದಲಿತ, ಅಲ್ಪಸಂಖ್ಯಾತರಿಗೆ ಚುನಾವಣೆಗೂ ಮುನ್ನ ಭಾರಿ ಆಶ್ವಾಸನೆ ನೀಡಿದ್ದ ಸಿದ್ದರಾಮಯ್ಯ ಈಗ ಅನುದಾನ ನೀಡದಿರುವುದು ತಪ್ಪು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.