► ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸಾಧನೆ ಸಹಿಸದ ಶಕ್ತಿಗಳಿಂದ ಕೃತ್ಯ: ಎಸ್.ಡಿ.ಪಿ.ಐ
ವಿಟ್ಲ: ಎಸ್.ಡಿ.ಪಿ.ಐ ವಿಟ್ಲ ವಲಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವಿಟ್ಲದ ಮೆಗಿನಪೇಟೆಯಲ್ಲಿ ನಡೆದಿದೆ.
ಸೋಮವಾರದಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪೈಂಟ್ ಮತ್ತು ಪೆಟ್ರೋಲ್ ಸುರಿದು ಬೆಂಕಿ ಹಾಕಲಾಗಿದೆ ಎಂದು ಅನುಮಾನಿಸಲಾಗಿದೆ.
ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಸಂಘಪರಿವಾರದ ಕಾರ್ಯಕರ್ತ ಕಲ್ಲಡ್ಕದ ಅಕ್ಷಯ್ ರಜಪೂತ್ ಎಂಬಾತ ಎಸ್.ಡಿ.ಪಿ.ಐ ಕಚೇರಿಗೆ ಯಾಕಾಗಿ ಬೆಂಕಿ ಹಾಕಬಾರದು ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಎಂದು ವಿಟ್ಲದಲ್ಲಿ ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಸ್.ಡಿ.ಪಿ.ಐ ಸ್ಥಳಿಯ ನಾಯಕ ಶಾಕಿರ್ ಅಳಕೆ ಮಜಲು, ಜಿಲ್ಲೆಯಲ್ಲಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಸಾಧನೆಯನ್ನು ಕಂಡು ಸಹಿಸದ ಶಕ್ತಿಗಳು ಈ ಕೃತ್ಯವನ್ನು ಮಾಡಿದೆ ಎಂದು ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಕಿರ್ ಅಳಕೆ ಮಜಲು ಹೇಳಿದ್ದಾರೆ.
ಪೊಲೀಸರು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಒಂದು ವೇಳೆ ಅದಕ್ಕೆ ವಿಫಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.