ಬೆಂಗಳೂರು: ವೈಯಕ್ತಿಕ ಗಲಾಟೆಗೂ ಕೋಮು ಸಂಘರ್ಷದ ಬಣ್ಣ ಹಚ್ಚಲು ಹವಣಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನೀಚತನಕ್ಕೆ ಸಾಗರದ ಘಟನೆ ಸಾಕ್ಷಿಯಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋಮು ದ್ವೇಷವನ್ನೇ ಉಸಿರಾಡುವ ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ವೈಯಕ್ತಿಕ ಗಲಾಟೆಗಳಿಗೂ ಸಹ ಕೋಮು ಸಂಘರ್ಷದ ಬಣ್ಣ ನೀಡಲು ಸಂಘಪರಿವಾರದ ಗೂಂಡಾಗಳ ಮೂಲಕ ಹವಣಿಸುತ್ತಿದೆ ಎನ್ನುವುದಕ್ಕೆ ಸಾಗರದಲ್ಲಿ ನಡೆದ ‘ಸಂಘಪರಿವಾರದ ಕಾರ್ಯಕರ್ತನ ಕೊಲೆ ಯತ್ನ’ ಎಂಬ ಅರ್ದಸತ್ಯ ಘಟನೆಯೇ ಸಾಕ್ಷಿ. ಚುನಾವಣೆಯ ಹೊಸ್ತಿಲಲ್ಲಿ, ಸೋಲು ನಿಶ್ಚಿತವಾಗಿರುವ ಭಯದಲ್ಲಿ ಬಿಜೆಪಿ ಇಂತಹ ನೀಚತನಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಸುನಿಲ್ ಎಂಬ ಬಜರಂಗದಳದ ಕಾರ್ಯಕರ್ತ ಸುಮಾರು ನಾಲ್ಕೈದು ತಿಂಗಳುಗಳಿಂದ ಸಮೀರ್ ಎಂಬವನ ಸಹೋದರಿಯನ್ನು ಚುಡಾಯಿಸುವ ನೀಚ ಕೆಲಸ ಮಾಡುತ್ತಿದ್ದ. ಇದೇ ವಿಚಾರವಾಗಿ ಈ ಹಿಂದೆಯೂ ಸಮೀರ್ ಮತ್ತು ಸುನಿಲ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಿನ್ನೆ ಇದೇ ವಿಚಾರವಾಗಿ ಸುನಿಲ್ ಮೇಲೆ ಹಲ್ಲೆಯಾಗಿದೆ. ಸುನಿಲ್ ಆಕೆಯನ್ನು ಚುಡಾಯಿಸುವ ಕಾಲ್ ರೆಕಾರ್ಡ್ಸ್ ಕೂಡ ಲಭ್ಯವಿದೆ ಎಂದು ಪೋಲೀಸ್ ಎಸ್‌ಪಿ ಜಿ.ಕೆ. ಮಿಥುನ್ ಅವರು ಹೇಳಿದ್ದಾರೆ. ವಿಷಯ ಹೀಗಿರಬೇಕಾದರೆ ಇದಕ್ಕೆ ಕೋಮು ದ್ವೇಷದ ಬಣ್ಣ ಹಚ್ಚಿ ಸಾಗರ ಬಂದ್ ಗೆ ಕರೆ ಕೊಡುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಲತೀಫ್ ಹೇಳಿದ್ದಾರೆ.
ಎಲ್ಲಾ ರಂಗದಲ್ಲೂ ಹೀನಾಯವಾಗಿ ಸೋತಿರುವ ಕೋಮುವಾದಿ ಬಿಜೆಪಿ ಸರ್ಕಾರಕ್ಕೆ ಜನರ ಮುಂದೆ ಹೋಗುವ ಮುಖ ಉಳಿದಿಲ್ಲ. ಹಾಗಾಗಿ ಕೋಮು ದ್ವೇಷದ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳುವ ದುಷ್ಟ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ, ಕಾಮಗಾರಿ ಕೇಳಬೇಡಿ, ಲವ್ ಜಿಹಾದ್ ರೀತಿಯ ಕೋಮು ದ್ವೇಷದ ವಿಚಾರಗಳ ಬಗ್ಗೆ ಮಾತನಾಡಿ ಎಂದಿರುವುದು ಬಿಜೆಪಿಯ ಚುನಾವಣಾ ಅಜಂಡಾವನ್ನು ಸ್ಪಷ್ಟಪಡಿಸುತ್ತದೆ. ಅದರ ಭಾಗವಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಿರಂತರವಾಗಿ ಕೋಮು ದ್ವೇಷದ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ದುಷ್ಟ ಸರ್ಕಾರಕ್ಕೆ ಶಾಂತಿ ಬೇಕಾಗಿಲ್ಲ ಎಂದ ಅವರು, ಇಂತಹ ಪರಿಸ್ಥಿತಿಯಲ್ಲಿ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಶಾಂತಿ ಕಾಪಾಡುವ ನಿಟ್ಟಿನಲ್ಲಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.