ರಸ್ತೆ ದುರಸ್ತಿಗೆ ಆಗ್ರಹಿಸಿ SDPIಯಿಂದ ಬಂಗೇರೆಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ

Prasthutha|

ಬಂಗೇರಕಟ್ಟೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಚ್ಚಿನ ಗ್ರಾಮ ಸಮಿತಿ ವತಿಯಿಂದ ಬಂಗೇರಕಟ್ಟೆ ಜಂಕ್ಷನ್ ನಲ್ಲಿ ಬಂಗೇರೆಕಟ್ಟೆ- ಅಮ್ಡಾಲ್ ನೆತ್ತರವರೆಗಿನ ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

- Advertisement -

SDPI ಮುಖಂಡ ಅಬ್ದುಲ್ ರೌಫ್ ಮಾತಾನಾಡಿ ” ಈ ರಸ್ತೆ ದುರಸ್ತಿಯಾಗದಿದ್ದರೆ ಎಲ್ಲಾ ಸ್ಥಳೀಯ ನಾಗರಿಕರು ಉಗ್ರವಾಗಿ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ,ಎಸ್‌ಡಿಪಿಐ ಪಕ್ಷದ ಜೊತೆ ಕೈಜೋಡಿಸಿ ರಸ್ತೆ ದುರಸ್ತಿಯಾಗುವವರೆಗೆ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಇದು ಕೇವಲ ಸಾಂಕೇತಿಕ ಪ್ರತಿಭಟನೆ. ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚರಗೊಂಡು ಒಂದು ತಿಂಗಳೊಳಗೆ ರಸ್ತೆಗೆ ಡಾಂಬರು ಹಾಕಬೇಕೆಂದು ನಾವು ಕಳವಳದಿಂದ ವಿನಂತಿಸುತ್ತಿದ್ದೇವೆ. ಇದು ಬೇಗ ಆಗದಿದ್ದರೆ, ಈ ಹೋರಾಟವು ಹೆಚ್ಚು ಶಕ್ತಿಶಾಲಿ ಮತ್ತು ತೀವ್ರವಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ನೀಡುತ್ತಿದ್ದೇವೆ” ಎಂದರು.

ಪ್ರತಿಭಟನೆಯನ್ನು ಉದ್ದೇಶಿಸಿ SDPI ಕಣಿಯೂರು ಬ್ಲಾಕ್ ಕಾರ್ಯದರ್ಶಿ T.S ಹನೀಫ್ ಮಾತನಾಡಿ ” ಬಂಗೇರಕಟ್ಟೆಯಿಂದ ಅಂಡಾಲ್- ನೆತ್ತರವರೆಗಿನ ರಸ್ತೆಯು ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಜನರು ಓಡಾಡಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿದ್ದು, ಅದನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕೆಂದು ನಾವು ಪ್ರತಿಭಟನೆಯ ಮೂಲಕ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ. ಅದರೊಂದಿಗೆ ಈ ರಸ್ತೆಯಲ್ಲಿ ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಪ್ರತಿದಿನ ತಮ್ಮ ಖಾಸಗಿ ವಾಹನಗಳಲ್ಲಿ ಹೋಗುವಾಗ ಅನುಭವಿಸುವ ನೋವು ಅಷ್ಟಿಷ್ಟಲ್ಲ. ಡಾಂಬರು ಹಲವು ವರ್ಷಗಳ ಹಿಂದೆ ಒಮ್ಮೆ ಹಾಕಲಾಗಿತ್ತು ಮತ್ತು ಯಾರೂ ಹಿಂತಿರುಗಿ ನೋಡಲಿಲ್ಲ. ಹಾಕಲಾದ ಡಾಂಬರು ಕಿತ್ತು ದೊಡ್ಡ ಗುಂಡಿಗಳಾಗಿ ಮಾರ್ಪಡುತ್ತಿದ್ದು, ಪ್ರಯಾಣಿಕರು ನಿರಂತರವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇದಕ್ಕೂ ಮೊದಲು, ಇಲ್ಲಿಯ ಜನರು ಇದಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ರಾಜಕಾರಣಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೇವಲ ಭರವಸೆಗಳನ್ನು ನೀಡುತ್ತಿದ್ದಾರೆ.” ಎಂದು ಆಕ್ರೋಶವನ್ನು ಹೊರಹಾಕಿದರು.

- Advertisement -

ಪ್ರತಿಭಟನೆಯ ಅಧ್ಯಕ್ಷತೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಳ್ಳಮಂಜ ಬೂತ್ ಸಮಿತಿಯ ಅಧ್ಯಕ್ಷರಾದ ಹನಿಫ್ ಬಳ್ಳಮಂಜ ವಹಿಸಿದ್ದರು. ಮತ್ತು ಮಡಂತ್ಯಾರು ಪಂಚಾಯತ್ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ , SDPI ಕಣಿಯೂರ್ ಬ್ಲಾಕ್ ಅಧ್ಯಕ್ಷರಾದ ಮುಸ್ತಫಾ, SDPI ಪಾರೆಂಕಿ ಬೂತ್ ಅಧ್ಯಕ್ಷರಾದ ಶಾಫಿ ಸಾಲುಮರ, SDPI ಪಾರೆಂಕಿ ಕಾರ್ಯದರ್ಶಿ ನಾಸಿರ್, SDPI ಮಚ್ಚಿನ ಬೂತ್ ಕಾರ್ಯದರ್ಶಿ ಉಸ್ಮಾನ್  ಉಪಸ್ಥಿತರಿದ್ದರು. ಪ್ರತಿಭಟನೆಯನ್ನು ವಝೀರ್ ಸಾಲುಮರ ನಿರೂಪಿಸಿ ವಂದಿಸಿದರು.



Join Whatsapp