ಹರೇಕಳ: ಎಸ್’ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮತ್ತು ಪಕ್ಷದ ಕಾರ್ಯಕರ್ತರ ಸಮ್ಮಿಲನ ಹಾಗು ಮುಂಬರುವ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷದ ಕ್ಯಾಡೆರ್ ಮತ್ತು ಕಾರ್ಯಕರ್ತರನ್ನು ಪೂರ್ವ ಸಜ್ಜುಗೊಳಿಸುವ ಸಲುವಾಗಿ ಬೂತ್ ಚಲೋ ಕಾರ್ಯಕ್ರಮವನ್ನು ಎಸ್’ಡಿಪಿಐ ಹರೇಕಳ ಗ್ರಾಮ ಸಮಿತಿ ಅಧೀನದಲ್ಲಿ ನ್ಯೂಪಡ್ಪುವಿನಲ್ಲಿ ಹಮ್ಮಿಕೊಳ್ಳಲಾಯಿತು.
ಎಸ್’ಡಿಪಿಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಅಸೀಫ್ ಸ್ವಾಗತ ಭಾಷಣದ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್’ಡಿಪಿಐ ಮುನ್ನೂರು ಬ್ಲಾಕ್ ಅಧ್ಯಕ್ಷ ಹಾಗು ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಬಶೀರ್ SM ಹರೇಕಳ ಗ್ರಾಮ ವ್ಯಾಪ್ತಿಯಲ್ಲಿ ಪಕ್ಷವನ್ನು ಸಂಘಟಿಸುವ ಬಗ್ಗೆ ಕಾರ್ಯತಂತ್ರ ರೂಪಿಸಿ, ಆ ಮೂಲಕ ಚುನಾವಣೆಗೆ ಸಜ್ಜಾಗಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್’ಡಿಪಿಐ ರಾಷ್ಟೀಯ ಕಾರ್ಯದರ್ಶಿ ಹಾಗು ಎಸ್’ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
ಬಳಿಕ ಮಾತನಾಡಿದ ಅವರು, ಈ ದೇಶದ ಮುಸ್ಲಿಂ, ದಲಿತ, ಕ್ರಿಶ್ಚಿಯನ್ ಮತ್ತು ಆದಿವಾಸಿ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ, ಸ್ಥಾನಮಾನಗಳನ್ನು ಕಡೆಗಣಿಸಲಾಗುತ್ತಿದ್ದು, ನಾವೆಲ್ಲರೂ ಒಟ್ಟಾಗಿ ರಾಜಕೀಯವಾಗಿ ಪ್ರಬಲಗೊಂಡು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದರು.
ಸಮುದಾಯದ ಮಹೋನ್ನತ ಸ್ಥಾನದಲ್ಲಿರುವ ಉಲಮಾ – ಉಮರಾ ನಾಯಕರುಗಳಿಗೆ, ಸಮುದಾಯದ ಯುವಕರಿಗೆ ಪೊಲಿಟಿಕಲ್ ಪವರ್ ರಾಜಕೀಯದ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕೆಂದು, ಅದೇ ರೀತಿ ಸರಕಾರದ ಅವೈಜ್ಞಾನಿಕ ಕಾನೂನು, ಜನ ವಿರೋಧಿ ಮಸೂದೆಗಳನ್ನು ವಿರೋದಿಸಬೇಕೆಂದು ಮತ್ತು 2B ಮೀಸಲಾತಿ ಪುನರ್ ಸ್ಥಾಪಿಸಲು ಹೋರಾಟವನ್ನು ಮುಂದುವರಿಸಬೇಕೆಂದು ಕರೆ ನೀಡಿದರು.
ಎಸ್’ಡಿಪಿಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಆಸೀಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರೇಕಳ ಗ್ರಾಮ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಮಲಾರ್, ಕಾರ್ಯದರ್ಶಿ ಇಬ್ರಾಹಿಂ, ಮತ್ತು ಗ್ರಾಮ ಸಮಿತಿ ಅಧೀನದ ಎಲ್ಲಾ ಬೂತ್ ಸಮಿತಿ ಪದಾಧಿಕಾರಿಗಳು, ಪಕ್ಷದ ಕ್ಯಾಡೆರ್’ಗಳು ಉಪಸ್ಥಿತರಿದ್ದರು.