ತುಮಕೂರು : ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಸಂಘಪರಿವಾರದ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಎಸ್ ಡಿಪಿಐ ತುಮಕೂರು ಜಿಲ್ಲಾ ಮುಖಂಡರು ಸೋಮವಾರ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷ ಹಲೀಮುಲ್ಲಾ ಶರೀಫ್, ಜಿಲ್ಲಾ ಸಮಿತಿ ಸದಸ್ಯ ಮುಕ್ತಿಯಾರ್ ಅಹ್ಮದ್ ನೇತೃತ್ವದ ನಿಯೋಗ ಎಸ್.ಪಿ.ಅವರನ್ನು ಭೇಟಿ ಮಾಡಿ ದೂರು ನೀಡಿತು. ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ದೂರಿನೊಂದಿಗೆ ಸಂಘಪರಿವಾರದ ನಾಯಕರು ಮಾಡಿರುವ ಭಾಷಣದ ವೀಡಿಯೋ ಕ್ಲಿಪ್, ಪತ್ರಿಕಾ ಸುದ್ದಿಗಳನ್ನು ಕೂಡ ಲಗತ್ತಿಸಲಾಗಿದೆ.
ಅಕ್ಟೋಬರ್ 22ರಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ತುಮಕೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ “ನಮ್ಮೊಂದಿಗೆ ಬದುಕಬೇಕಾದರೆ ಸರಿಯಾಗಿ ಇರಿ, ನಾವು ಹೇಳಿದಂತೆ ಕೇಳಬೇಕು. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ, ನಾವು ಪ್ರತಿಕ್ರಿಯೆ ಕೊಡಲು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರುವುದಿಲ್ಲ.ಹಿಂದೂಗಳ ಮೇಲೆ ಹಲ್ಲೆ ಗೂಂಡಾಗಿರಿ ಮಾಡಿದರೆ, ಗೋಹತ್ಯೆ, ಲವ್ ಜಿಹಾದ್ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ. ನಾವು ಬಹುಸಂಖ್ಯಾತರು, ನಮ್ಮೊಂದಿಗೆ ಬದುಕಬೇಕಾದರೆ ಸರಿಯಾಗಿ ಇರಬೇಕು” ಎಂದು ವಿಶ್ವಹಿಂದೂ ಪರಿಷತ್ ನಾಯಕ ಬಸವರಾಜ ಎಂಬವರು ಹೇಳಿಕೆ ನೀಡಿದ್ದರು.
ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸದ ಪೊಲೀಸ್ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಮ್ ಸಂಘಟನೆಗಳು ಸೋಮವಾರ ಎಸ್ ಡಿಪಿಐ ನೇತೃತ್ವದಲ್ಲಿ ದೂರು ನೀಡಿದೆ.