ಕಾಪು: ವಿಪ್ ಉಲ್ಲಂಘಿಸಿದ ಕಾಪು ಪುರಸಭಾ ಸದಸ್ಯೆ ಸರಿತಾರನ್ನು ಉಚ್ಚಾಟಿಸಿ ಕಾನೂನು ಕ್ರಮಕ್ಕೆ ಎಸ್ ಡಿಪಿಐ ಮುಂದಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಎಸ್ ಡಿಪಿಐ, ಕಾಪು ಪುರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮೀಸಲಾತಿ ಘೋಷಣೆಯಾಗಿತ್ತು.
ಆದರೆ ಇಲ್ಲಿ SDPI ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಎಸ್ಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿದ್ದರೆ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎಸ್ಸಿ ಅಭ್ಯರ್ಥಿಯೇ ಇರಲಿಲ್ಲ. ಆದರಿಂದ ಆರಂಭದಲ್ಲೇ ಕಾಂಗ್ರೆಸ್ ಮತ್ತು SDPI ನಾವು ಒಟ್ಟಾಗಿ ಒಂದು ಅಭ್ಯರ್ಥಿಯನ್ನು ಹಾಕಿ ಅರ್ಧ ಅರ್ಧ ಅವಧಿಯಾಗಿ ಅಧಿಕಾರ ಹಂಚಿಕೊಳ್ಳುವ ಎಂಬ ಉದ್ದೇಶದಿಂದ ಕಾಂಗ್ರೆಸ್ ಜೊತೆಗೆ ಹಲವು ದಿನಗಳಿಂದ ಮಾತುಕತೆಗೆ ಪ್ರಯತ್ನ ನಡೆಸುತ್ತಿದ್ದರೂ, ಯಾವುದೇ ನಾಯಕರು ಮಾತುಕತೆಗೆ ಸಿಗಲಿಲ್ಲ. ಕಾಂಗ್ರೆಸ್ ನಾಯಕ ಸೊರಕೆ ಅವರು ನಮ್ಮೊಂದಿಗೆ ಯಾವುದೇ ಮಾತುಕತೆಗೆ ಮುಂದಾಗದಂತೆ ಇತರ ನಾಯಕರಿಗೆ ನಿರ್ದೇಶನ ನೀಡಿದ್ದರು. ಚುನಾವಣೆಯ ಕೊನೆ ಗಳಿಗೆಯಲ್ಲಿ ಬಿಜೆಪಿಯು 20 ನೇ ಗುಜ್ಜಿ ವಾರ್ಡಿನಿಂದ SDPI ಪಕ್ಷದಿಂದ ಪುರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಸರಿತಾ ರನ್ನು ತನ್ನತ್ತ ಸೆಳೆದುಕೊಂಡು ಆಪರೇಷನ್ ಕಮಲ ಮಾಡಿ, ಅನೈತಿಕವಾಗಿ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಒಂದು ವೇಳೆ ಮಾತುಕತೆಗೆ ಕಾಂಗ್ರೆಸ್ ಹಠಮಾರಿತನ ಬಿಟ್ಟು ಬಿಜೆಪಿಯನ್ನು ಸೋಲಿಸಲು ಮುಂದಾಗಿದ್ದರೆ ಸರಿತಾ ಅವರು ಬಿಜೆಪಿ ಜೊತೆ ಸೇರುತ್ತಿರಲಿಲ್ಲ ಎಂದು ಹೇಳಿದೆ.
ಚುನಾವಣೆ ಸಂದರ್ಭದಲ್ಲಿ SDPI ಪಕ್ಷ ಬಿಜೆಪಿಯನ್ನು ಸೋಲಿಸುವ ಭಾಗವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಆದೇಶಿಸಿ ತನ್ನ ಪಕ್ಷದ ಪುರಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಆದರೆ ಸರಿತಾ ಶಿವಾನಂದ್ ಅವರು ಬಿಜೆಪಿಯ ಬೆಂಬಲ ಪಡೆದು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಪಕ್ಷದ ವಿಪ್ ಆದೇಶವನ್ನು ಉಲ್ಲಂಘನೆ ಮಾಡಿ ಪಕ್ಷ ವಿರೋಧಿಯಾಗಿ ನಡೆದುಕೊಂಡಿರುವುದು ಪಕ್ಷ ವಿರೋಧಿ ಚಟುವಟಿಕೆ ಮತ್ತು ವಿಶ್ವಾಸ ದ್ರೋಹದ ಪರಮಾವಧಿಯಾಗಿದೆ. ಸರಿತಾ ಶಿವಾನಂದ್ ಅವರು ಪಕ್ಷ ವಿರೋಧಿಯಾಗಿ ಉಮೇದುದಾರಿಕೆ ಸಲ್ಲಿಸಿದ ಕೂಡಲೇ SDPI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವ ಅವರು ಪಕ್ಷದ ವಿಪ್ ವಿರುದ್ಧವಾಗಿ ಉಮೇದುದಾರಿಕೆ ಸಲ್ಲಿಸಿದ್ದರಿಂದ ಉಮೇದುದಾರಿಕೆಯನ್ನು ತಿರಸ್ಕರಿಸಬೇಕೆಂದು ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದರು. ನಂತರ ಪಕ್ಷದ ವಿಪ್ ವಿರುದ್ಧ ನಡೆದ ಪುರಸಭಾ ಸದಸ್ಯೆ ಸರಿತಾ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಪಕ್ಷದ ಜಿಲ್ಲಾ ಸಮಿತಿಯು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದೆ. ಕೂಡಲೇ ವಿಪ್ ವಿರುದ್ಧ ಪಕ್ಷಕ್ಕೆ ದ್ರೋಹ ಬಗೆದ ವಿಚಾರದಲ್ಲಿ ಕಾನೂನು ಕ್ರಮ ನಡೆಸುವುದಾಗಿ ಎಸ್ ಡಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.