ಕುಂಬಳೆ: ಸಂಘಪರಿವಾರಕ್ಕೆ ತೀವ್ರ ತಿರುಗೇಟು ನೀಡಿ, ಪರಂಪರಾಗತ ರಾಜಕೀಯ ಪಕ್ಷಗಳನ್ನು ಅಚ್ಚರಿಗೊಳಿಸಿ ಎಸ್.ಡಿ.ಪಿ.ಐ. ಗಳಿಸಿದ ಅಭೂತಪೂರ್ವ ಮುನ್ನಡೆ ಫ್ಯಾಶಿಸ್ಟರ ಅವನತಿಗೆ ಸ್ಪಷ್ಟ ಸೂಚನೆಯಾಗಿದೆ ಎಂದು ಎಸ್.ಡಿ.ಪಿ.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ತುಳಸೀಧರನ್ ಪಳ್ಳಿಕ್ಕಲ್ ಹೇಳಿದರು. ಎಸ್.ಡಿ.ಪಿ.ಐ. ಜನಪ್ರತಿನಿಧಿಗಳಿಗೆ ಪಕ್ಷದ ಕಾಸರಗೋಡು ಜಿಲ್ಲಾ ಸಮಿತಿ ಕುಂಬಳೆಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಂಘ ಪರಿವಾರವನ್ನು ಸೋಲಿಸುವಲ್ಲಿ ಎಡ-ಬಲ ರಂಗಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ, ಆರ್ಥಿಕ ಮೀಸಲಾತಿಯಲ್ಲಿ ಈ ರಂಗಗಳ ದ್ವಂದ್ವ ನಿಲುವುಗಳ ಕಪಟತನ ನಾವು ಅರ್ಥೈಸಬೇಕಾಗಿದೆಯೆಂದೂ ಅವರು ತಿಳಿಸಿದರು.
ಆರಿಕ್ಕಾಡಿಯಿಂದ ಜನಪ್ರತಿನಿಧಿಗಳನ್ನು ಬೃಹತ್ ರ್ಯಾಲಿಯ ಮೂಲಕ ಕುಂಬಳೆಯ ಸನ್ಮಾನ ಸಮಾರಂಭದ ವೇದಿಕೆಗೆ ಕರೆತರಲಾಯಿತು. ಜಿಲ್ಲಾಧ್ಯಕ್ಷರಾದ ಎನ್.ಯು. ಅಬ್ದುಸ್ಸಲಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಚುನಾಯಿತ ಜನಪ್ರತಿನಿಧಿಗಳಾದ ಅನ್ವರ್ ಆರಿಕ್ಕಾಡಿ, ಖಮರುನ್ನಿಸಾ ಮುಸ್ತಪಾ, ದೀಕ್ಷಿತ್ ಕಲ್ಲಂಗೈ, ಹಮೀದ್ ಹೊಸಂಗಡಿ, ಅಬೂಬಕ್ಕರ್ ನಿಲೇಶ್ವರಂ, ಅಬೂಬಕ್ಕರ್ ಸಿದ್ದೀಖ್(ರೈಶು), ಕುಲ್ಸುಮ್ಮ ಮುಂತಾದರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಅರಫಾ, ಮುಬಾರಕ್ ಕಡಂಬಾರ್ ಮುಂತಾದವರು ಮಾತನಾಡಿದರು. ಮಂಡಲಂ ಮಟ್ಟದ ನೇತಾರರಾದ ಅನ್ಸಾರ್ ಹೊಸಂಗಡಿ, ಗಫೂರ್ ನಾಯಮ್ಮಾರ್ಮೂಲ, ಮೂಸ ಈಚ್ಚಿಲ್ಲಂಗಾಲ್, ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಕಬೀರ್ ಬ್ಲಾರ್ಕೋಡ್, ಎಸ್.ಡಿ.ಟಿ.ಯು. ಜಿಲ್ಲಾಧ್ಯಕ್ಷರಾದ ಅಶ್ರಫ್ ಕೋಳಿಯಡ್ಕ ಉಪಸ್ಥಿತರಿದ್ದರು.