ಪುತ್ತೂರು: ಕಡಬ ತಾಲೂಕಿನ ದೋಲ್ಪಾಡಿಯಲ್ಲಿ ಇತ್ತೀಚೆಗೆ ಬೆಡ್ ಶೀಟ್ ವ್ಯಾಪಾರಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಗುಂಪು ಹಲ್ಲೆಯನ್ನು ಸಮರ್ಥಿಸಿ ಹಾಗೂ ಆರೋಪಿಗಳ ಬಂಧನ ಕ್ರಮವನ್ನು ಖಂಡಿಸಿ ಕಾಣಿಯೂರಿನಲ್ಲಿ ಸಂಘಪರಿವಾರ ನಡೆಸಿದ ಹಿಂದೂ ಜನಜಾಗೃತಿ ಸಭೆಯಲ್ಲಿ ಮುಸ್ಲಿಮರ ರ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಇತ್ತೀಚೆಗೆ ಕಾಣಿಯೂರಿನ ದೋಲ್ಪಾಡಿಯಲ್ಲಿ ಸಂಘಪರಿವಾರದ ಕಾರ್ಯಕರ್ತರು ನಡೆಸಿದ ಗುಂಪು ಹಲ್ಲೆಯ ವಿಕೃತಿಯನ್ನು ಸಮರ್ಥಿಸುವ ಮೂಲಕ ತಮ್ಮ ನೈಜ ಸಂಸೃತಿಯನ್ನು ಪುನರಾವರ್ತನೆ ಗೊಳಿಸಿದ್ದಾರೆ.
ಅರುಣ್ ಕುಮಾರ್ ಪುತ್ತಿಲ ತನ್ನ ಭಾಷಣದಲ್ಲಿ ಮುಸ್ಲಿಮ ರನ್ನು ಬೆತ್ತಲೆ ಮೆರವಣಿಗೆ ಮಾಡಲಾಗುವುದು,ಬೀದಿಯಲ್ಲಿ ಅಟ್ಟಾಡಿಸಿ ಕೈಕಾಲು ಕತ್ತರಿಸಿ ಹಾಕಲಾಗವುದು, ಎಂಬಿತ್ಯಾದಿ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ.
ಪುತ್ತಿಲ ಒಮ್ಮೆ ತನ್ನ ಇತಿಹಾಸದ ದಿನಗಳನ್ನು ನೆನಪಿಸಿಕೊಳ್ಳಲಿ,ಹಲವು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಗಲಭೆ ಎಬ್ಬಿಸಲು ಪ್ರಯತ್ನಿಸಿ ಪುತ್ತೂರು ಠಾಣೆಯಲ್ಲಿ ಸಾರ್ವಜನಿಕರಿಂದಲೇ ಗೂಸ ತಿಂದು ಕೈಕಾಲು ಕತ್ತರಿಸಿ ಹೋಗುವ ಮೊದಲು ಪುತ್ತೂರಿನ ಪೇಟೆಯಲ್ಲಿ ಓಡಿಕೊಂಡು ಬಚವಾದ ನಂತರ ಹಲವು ವರ್ಷಗಳ ಕಾಲ ಬಿಲದಿಂದ ಹೊರಕ್ಕೆ ಬಾರದೆ ಅಡಗಿ ಕೂತದ್ದು ಪುತ್ತೂರಿನ ಜನತೆ ಮರೆಯಲಿಲ್ಲ ಎಂಬ ವಾಸ್ತವವನ್ನು ಅರಿತಿದ್ದರೆ ಒಳ್ಳೆಯದು ಇಲ್ಲದಿದ್ದಲ್ಲಿ ಸಾರ್ವಜನಿಕರೇ ಇತಿಹಾಸವನ್ನು ಮರು ಸೃಷ್ಟಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಗೋ ಸಾಗಾಟಗಾರರ ವಾಹನವನ್ನು ಮತ್ತು ವ್ಯಾಪಾರಿಗಳನ್ನು ಬೆಂಕಿ ಹಚ್ಚಿ ಕೊಲೆ ಮಾಡಲು ಬಹಿರಂಗ ಕರೆ ನೀಡಿದ ಈತ ಮೊದಲು ವಿದೇಶಕ್ಕೆ ಬೀಫ್ ರಫ್ತು ಮಾಡುವ ಕೇಂದ್ರ ಬಿಜೆಪಿ ಸರ್ಕಾರದಲ್ಲಿ ಇರುವವರನ್ನು ಸುಟ್ಟು ಹಾಕಿ ನಂತರ ಭಾಷಣ ಬಿಗಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ರಘು ಸಕಲೇಶಪುರ ಎಂಬಾತ ಮಾತನಾಡುತ್ತಾ ಮೀನು ವ್ಯಾಪಾರ ಮಾಡುವ ಬ್ಯಾರಿಗಳ ಮೀನಿನ ಬುಟ್ಟಿಗೆ ಫಿನಾಯಿಲ್ ಹಾಕಿ ಹಾಗೂ ಟಿಪ್ಪು ಪ್ರತಿಮೆ ನಿರ್ಮಿಸುವ ಹೇಳಿಕೆ ನೀಡಿದ ಶಾಸಕ ತನ್ವೀರ್ ಸೇಠ್ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದರು ಪೋಲಿಸ್ ಇಲಾಖೆ ಇನ್ನೂ ಇವರ ವಿರುದ್ಧ ಯಾಕಾಗಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೋಮು ಪ್ರಚೋದನಕಾರಿ ಭಾಷಣ ಮಾಡಿ ಹಿಂದು-ಮುಸ್ಲಿಮರ ನಡುವೆ ಧಾರ್ಮಿಕ ವೈಷಮ್ಯ ಮೂಡಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ಸಂಘಪರಿವಾರದ ನಾಯಕರ ಮೇಲೆ ಹಾಗೂ ಸಭೆಯ ಆಯೋಜಕರ ಮೇಲೆಯೂ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.