ಜುಲೈ ಅಂತ್ಯದೊಳಗೆ ಲಸಿಕೆ ಸಂಪೂರ್ಣಗೊಂಡ ಜಿಲ್ಲೆಯಾಗಿ ದ.ಕ ಜಿಲ್ಲೆಯನ್ನು ಪರಿವರ್ತಿಸಲು ಎಸ್ಡಿಪಿಐ ಆಗ್ರಹ

Prasthutha|

ಮಂಗಳೂರು : ಕೊರೋನಾ ಎರಡನೇ ಅಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಾವು ನೋವುಗಳು ಸಂಭವಿಸಿದ್ದು, ಇದಕ್ಕೆ ಸರಕಾರದ ಅಸಮರ್ಪಕ, ಪೂರ್ವಯೋಜನೆ ಇಲ್ಲದ ಅವೈಜ್ಞಾನಿಕ ತೀರ್ಮಾನಗಳೇ ಕಾರಣ ಎಂದು ಎಸ್ಡಿಪಿಐ ಆರೋಪಿಸಿದೆ.

- Advertisement -

ಕೋವಿಡ್ ಸೋಂಕು ತಗಲಿದ ಸಂದರ್ಭದಲ್ಲಿ ವ್ಯಕ್ತಿಗೆ ಲಸಿಕೆ ನೀಡಿದರೆ ಹೆಚ್ಚಿನ ಹಾನಿಯನ್ನು ತಪ್ಪಿಸಲು ಸಾಧ್ಯವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ವ್ಯಾಕ್ಸಿನ್ ವಿತರಣೆಯಲ್ಲಿ ಸರಕಾರ ನಿಧಾನಗತಿಯಲ್ಲಿ ಸಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ನೋಂದಣಿ ಮಾಡಿದ ನಾಗರಿಕರು ಸರಕಾರಿ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿ ಸರಿಯಾದ ಮಾಹಿತಿ ನೀಡಲು ಸಿಬ್ಬಂದಿಗಳಿಲ್ಲದೆ ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆ ಇರುವ ರೋಗಿಗಳು ಬೆಳಿಗ್ಗೆ ಯಿಂದ ಸಂಜೆಯವರೆಗೆ ಆಸ್ಪತ್ರೆಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗುತ್ತಿದೆ. ಈ ಬಗ್ಗೆ ಕೂಡಲೇ ಸಮರ್ಪಕವಾದ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಅದೇ ರೀತಿ ಸರಕಾರ ಉಚಿತವಾಗಿ ನೀಡಬೇಕಾದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ. ಇದು ಖಾಸಗಿ ಆಸ್ಪತ್ರೆಗಳಿಗೆ ಸಿಗುವುದಾದರೂ ಎಲ್ಲಿಂದ ಎಂದು ಎಸ್ಡಿಪಿಐ ಪ್ರಶ್ನಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ನೇತೃತ್ವದ ನಿಯೋಗವು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವ್ಯಾಕ್ಸಿನ್ ವಿತರಿಸಬೇಕು. ಜುಲೈ ಅಂತ್ಯದೊಳಗಾಗಿ ಜಿಲ್ಲೆಯ ಎಲ್ಲಾ ನಾಗರಿಕರಿಗೂ ವ್ಯಾಕ್ಸಿನ್ ನೀಡುವ ಮೂಲಕ ದ.ಕ ಜಿಲ್ಲೆಯನ್ನು ವ್ಯಾಕ್ಸಿನ್ ಸಂಪೂರ್ಣಗೊಂಡ ಜಿಲ್ಲೆಯಾಗಿ ಪರಿವರ್ತಿಸಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದೆ.

- Advertisement -

ಮಳೆಗಾಲ ಆರಂಭವಾದ ಕಾರಣ ಡೆಂಗ್ಯೂ ಮಲೇರಿಯಾದಂತಹ ರೋಗಗಳು ಬರುವ ಸಾಧ್ಯತೆ ಇದ್ದು, ಅದನ್ನು ತಡೆಯಲು ಸಂಬಂಧಪಟ್ಟ ಇಲಾಖೆಗಳ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ನಿಯೋಗ ಮನವಿ ಮಾಡಿದೆ.ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿಗಳಾದ ಅನ್ವರ್ ಸಾದತ್ ಬಜತ್ತೂರು ಹಾಗೂ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.



Join Whatsapp