ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ತಾರತಮ್ಯ ನೀತಿಯನ್ನು ಸರಿಪಡಿಸಿ ಹತ್ಯೆಗೀಡಾದ ಮಸೂದ್, ಫಾಝಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಗಳಿಗೆ ಸಿದ್ದರಾಮಯ್ಯ ಸರಕಾರ ತಲಾ 25 ಲಕ್ಷ ಪರಿಹಾರ ಘೋಷಿಸಿದ್ದು ಸ್ವಾಗತಾರ್ಹ. ಅದೇ ರೀತಿ ಸಂಘಪರಿವಾರದಿಂದ ಹತ್ಯೆಗೀಡಾದ ಇತರರಿಗೂ ಪರಿಹಾರವನ್ನು ಘೋಷಿಸುವ ಮೂಲಕ ಸಿದ್ದರಾಮಯ್ಯ ಸರಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲಿ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷವು ಆಗ್ರಹಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕರ್ನಾಟಕ ಬಿಜೆಪಿ ಯ ತಾರತಮ್ಯ ನೀತಿಗೆ ಒಳಗಾಗಿದ್ದ ಮಸೂದ್, ಫಾಝಿಲ್, ಜಲೀಲ್, ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಘೋಷಿಸಿರುವ ಸಿದ್ದರಾಮಯ್ಯನವರೇ ನರಗುಂದದ ಸಮೀರ್, ಮಂಡ್ಯದ ಇದ್ರಿಷ್ ಪಾಷಾ ಕುಟುಂಬಗಳಿಗೆ ಯಾಕೆ ಪರಿಹಾರ ಘೋಷಿಸಿಲ್ಲ? ಇದು ಕಾಂಗ್ರೆಸ್ ಸರ್ಕಾರದ ತಾರತಮ್ಯವಲ್ಲವೇ? ಈ ಕುಟುಂಬಗಳಿಗೂ ಪರಿಹಾರ ಘೋಷಿಸಿ ಎಂದು ಆಗ್ರಹಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ ಸಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ನೀವು ಗೋಲಿಬಾರ್ ಗೆ ಬಲಿಯಾದ ನೌಶೀನ್, ಸಂಘಪರಿವಾರದ ನಾಯಕನ ಕೈಯಿಂದ ಹತ್ಯೆಯಾದ ದಲಿತ ಸಮುದಾಯದ ದಿನೇಶ್ ಕನ್ಯಾಡಿ ಕುಟುಂಬಕ್ಕೂ ಪರಿಹಾರವನ್ನು ನೀಡುವ ಮೂಲಕ ಪರಿಹಾರ ವಿತರಣೆಯಲ್ಲಿಯೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತೀರಿ ತಾನೇ? ಎಂದು ಅವರು ಕಾಂಗ್ರೆಸ್ ಸರಕಾರಕ್ಕೆ ಕೇಳಿಕೊಂಡಿದ್ದಾರೆ.
SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಟ್ವೀಟ್ ಮಾಡಿ, ಬೊಮ್ಮಾಯಿ ಸರ್ಕಾರದ ತಾರತಮ್ಯ ನೀತಿಯನ್ನು ಸರಿಪಡಿಸಿ ಮಸೂದ್, ಫಾಝಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಅದೇ ರೀತಿ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ನಡೆದಿದೆ. ಮತ್ತು ಪೋಲಿಸ್ ಗೋಲಿಬಾರ್ ನಿಂದ ಹುತಾತ್ಮರಾದ ಜಲೀಲ್ ಹಾಗೂ ನೌಷೀನ್ ಕುಟುಂಬಕ್ಕೆ ಯಡಿಯೂರಪ್ಪ ಸರ್ಕಾರ ಪರಿಹಾರ ಘೋಷಿಸಿ ನಂತರ RSS ಮುಖಂಡರ ಒತ್ತಡದಿಂದ ಪರಿಹಾರ ಹಿಂಪಡೆದಿತ್ತು. ಇವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರವಾಗಿ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.