ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಭೇಟಿಯಾದ ಎಸ್ ಡಿಪಿಐ ನಿಯೋಗ

Prasthutha|

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದು ಅದನ್ನು ಕೂಡಲೇ ನಿಯಂತ್ರಸುವಂತೆ ಆಗ್ರಹಿಸಿ ಎಸ್ ಡಿಪಿಐ ನಿಯೋಗ ವಿಮಾನ ನಿಲ್ದಾಣದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ವಿಮಾನ ನಿಲ್ಧಾಣದಲ್ಲಿ ನಡೆಯುತ್ತಿರುವ ಈ ಕೆಳಗಿನ ಸಮಸ್ಯೆಯ ಬಗ್ಗೆ ಚರ್ಚಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಹೋಗುವ ಮತ್ತು ಒಳ ಬರುವ ಪ್ರಯಾಣಿಕರಿಗೆ ಅಲ್ಲಿನ ಸಿಬ್ಬಂದಿಗಳು, ಕಸ್ಟಮ್ಸ್  ಅಧಿಕಾರಿಗಳು ನಿರಂತರವಾಗಿ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ.

- Advertisement -

ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಒಂದು ದೇಶಕ್ಕೆ ಕನೆಕ್ಟ್ ಆಗಿ ಇನ್ನೊಂದು ದೇಶಕ್ಕೆ ಹೋಗುವ ವಿಮಾನದ ಟಿಕೆಟ್ ಪಡೆಯುವುದು ಸಾಮಾನ್ಯ ಪ್ರಕ್ರಿಯೆ ಆಗಿದೆ. ಆದರೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಂತಹ ಟಿಕೆಟ್  ತೋರಿಸಿದರೆ ಎರಡೂ ದೇಶಗಳ ವಿಸಾ ಕೇಳುವುದು, ಪಾಸ್‌ಪೋರ್ಟ್ ಸರಿಯಿಲ್ಲ ಎಂಬ ಆರೋಪ ಹೊರಿಸುವುದು. ವಿಸಾ ಅವಧಿ ಮುಗಿಯಲು ಕನಿಷ್ಟ ದಿನಗಳು ಇದ್ದರೆ ಅಂತಹ  ಪ್ರಯಾಣಿಕರನ್ನು ಭಯಪಡಿಸುವ ರೀತಿಯ ಪ್ರಶ್ನೆಗಳನ್ನು ಕೇಳುವುದು, ನಿಮ್ಮ ವಿಸಾ ಅವದಿ ಒಂದು ತಿಂಗಳು ಮಾತ್ರ ಅವಧಿ ಇರುವುದು ಆದ್ದರಿಂದ ನಿಮಗೆ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಬೆದರಿಸುವುದು. ಅದೇ ರೀತಿ ಪ್ರಥಮವಾಗಿ ಪ್ರಯಾಣಿಸುವ ಪ್ರಯಾಣಿಕರನ್ನು ಕಳ್ಳನಂತೆ ನೋಡುವುದು, ವಿದೇಶಕ್ಕೆ ನಿರಂತರವಾಗಿ ಪ್ರಯಾಣಿಸುವವರನ್ನು ಯಾಕಾಗಿ ನೀನು ಪದೇ ಪದೇ ವಿದೇಶಕ್ಕೆ ಹೋಗುತ್ತಿಯಾ ಎಂದು ಅನಗತ್ಯವಾಗಿ ಪ್ರಶ್ನಿಸುವುದು ಸೇರಿದಂತೆ ವಿದೇಶಕ್ಕೆ ಪ್ರಯಾನಣಿಸುವ ನಾಗರಿಕರನ್ನು ಮಾನಸಿಕವಾಗಿ ಹಿಂಸಿಸುವ ಕೆಲಸ ನಡೆಯುತ್ತಿದೆ. ಅದೇರೀತಿ ವಿದೇಶದಿಂದ ಹಿಂತಿರುಗುವವರನ್ನು ಕಸ್ಟಮ್ಸ್ ಅಧಿಕಾರಿಗಳು ಸಿಬ್ಬಂದಿಗಳು ಬೇರೆ ಬೇರೆ ರೀತಿಯಲ್ಲಿ ಪೀಡಿಸುತ್ತಿದ್ದಾರೆ. ಒಳ ಬರುವ ಪ್ರಯಾಣಿಕರ ಕೈಯಲ್ಲಿ ಉಪಯೋಗಿಸಿದ ಮೊಬೈಲ್ ಮೇಲೆ ದಂಡ ವಿಧಿಸುವುದು, ದೇಹದ ಮೇಲೆ ಧರಿಸಿದ ಆಭರಣಗಳ ಮೇಲೆ ತೆರಿಗೆ ವಿಧಿಸುವುದು, ಮಕ್ಕಳ ಆಟಿಕೆಯಂತಹ ವಸ್ತುಗಳನ್ನು ವಶಪಡಿಸಿ ಪ್ರಯಾಣಿಕರನ್ನು ಹಿಂಸಿಸುವುದು ಸೇರಿದಂತೆ ವಿವಿಧ ರೀತಿಯ ಹಿಂಸೆಗಳನ್ನು ನೀಡುತ್ತಿದ್ದಾರೆ.ಕೊಲ್ಲಿ ರಾಷ್ಟ್ರ ಸೇರಿದಂತೆ ವಿದೇಶಗಳಿಗೆ ದುಡಿಯಲು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಬಹುತೇಕ ಪ್ರಯಾಣಿಕರು ಬಡವರಾಗಿದ್ದು ನಮ್ಮ ದೇಶದಲ್ಲಿ ಸೂಕ್ತವಾದ ಉದ್ಯೋಗ, ನೌಕರಿ ಸಿಗದ ಕಾರಣ ಹೊಟ್ಟೆ ಪಾಡಿಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ನಮ್ಮ ದೇಶದ ಸರಕಾರ ಪ್ರತಿಯೊಬ್ಬ ನಾಗರಿಕರಿಗೆ ಘನತೆಯಿಂದ ಬದುಕಲು ಉದ್ಯೋಗ ಕೊಡಬೇಕಾಗಿತ್ತು ಆದರೆ ಇಲ್ಲಿನ ಸರಕಾರಗಳು ಇದನ್ನು ನಿರ್ಲಕ್ಷ್ಯ ಮಾಡಿದ ಕಾರಣ ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಆದರೆ ಇದೀಗ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಅವಕಾಶ ನೀಡದೆ ವಿಮಾನ ನಿಲ್ದಾಣದ ಅಧಿಕಾರಿಗಳು ಸತಾಯಿಸುತ್ತಿರುವುದು ಅಮಾನವೀಯ ಘಟನೆಯಾಗಿದೆ.

ಕೋವಿಡ್ ಕಾಲದಲ್ಲಿ ವಿದೇಶಿ ಪ್ರಯಾಣ ಕೈಗೊಳ್ಳುವಾಗ ಕೋವಿಡ್ ಟೆಸ್ಟ್ ಮಾಡುವುದು ಅನಿವಾರ್ಯವಾಗಿದೆ.  ಮಂಗಳೂರಿನ ಕೆ.ಎಂ.ಸಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪರೀಕ್ಷೆ ನಡೆಸುವಾಗ ನೆಗೆಟಿವ್ ವರದಿ ಬಂದರೂ ಕೆಲವು ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ  ಪರೀಕ್ಷೆ ನಡೆದಾಗ ಪಾಸಿಟಿವ್ ವರದಿಗಳು ಬರುತ್ತಿರುವ ಬಗ್ಗೆ ತಾವುಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ನಿಯೋಗ ಒತ್ತಾಯಿಸಿತು. ಅನಿವಾಸಿ ಭಾರತೀಯರಿಗೆ ವಿಮಾನ ನಿಲ್ದಾಣದಲ್ಲಿ ಆಗುವಂತಹ ಕಿರುಕುಳಗಳು ಮುಂದುವರಿದರೆ ಇಡೀ ಜಿಲ್ಲೆಯ ನಾಗರಿಕರನ್ನು ಸೇರಿಸಿ ಜನಾಂದೋಲನ ಹಾಗೂ ಕಾನೂನು ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.

- Advertisement -

ನಿಯೋಗದಲ್ಲಿ ಎಸ್ ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಪಳ್ನೀರ್ ಉಪಸ್ಥಿತರಿದ್ದರು.



Join Whatsapp