ಮಂಗಳೂರು: ಪ್ರಾಕೃತಿ ವಿಕೋಪದ ಪರಿಶೀಲನೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಂಟ್ವಾಳದಿಂದ ಮಂಗಳೂರಿಗೆ ಸಂಚರಿಸುವ ಮಾರ್ಗದಲ್ಲಿ “ಬ್ರಹ್ಮರಕೊಟ್ಲು ಟೋಲ್ ಗೇಟ್ ನಿಂದ ಮುಕ್ತಿ ನೀಡಿ” ಎಂದು ಒತ್ತಾಯಿಸಿ ಎಸ್.ಡಿ.ಪಿ.ಐ.ಕಾರ್ಯಕರ್ತರು ಟೋಲ್ ಗೇಟ್ ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದ ಬ್ರಹ್ಮರಕೊಟ್ಲು ಟೋಲ್ ಗೇಟ್ ಸಂಪೂರ್ಣವಾಗಿ ಅವೈಜ್ಞಾನಿಕತೆಯಿಂದ ಕೂಡಿದ್ದು ಅದೊಂದು ಹಣ ಸುಲಿಗೆಯ ಕೇಂದ್ರದಂತಿದೆ. ಮಳೆಗಾಲ ಆರಂಭವಾದ ಬಳಿಕ ಟೋಲ್ ಗೇಟ್ ನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು ಬೃಹತ್ ಹೊಂಡಗಳು ಬಿದ್ದಿವೆ. ಆದರೂ ಈ ವರೆಗೆ ಅದನ್ನು ದುರಸ್ತಿ ಮಾಡಿಲ್ಲ. ಒಂದು ಗೇಟ್ ನಿಂದ ಮಾತ್ರ ವಾಹನಗಳು ಸಂಚರಿಸುತ್ತಿವೆ. ಹೊಂಡಗಳಿಂದಾಗಿ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ. ಇಲ್ಲಿ ವಾಹನಗಳು ತಾಸುಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ದಿನನಿತ್ಯ ತುರ್ತು ವಾಹನಗಳು ಇಲ್ಲಿ ಸಿಲುಕಿಕೊಂಡು ಪರದಾಡುತ್ತವೆ. ಅವ್ಯವಸ್ಥೆಯ ಬಗ್ಗೆ ಪ್ರಶ್ನಿಸುವ ವಾಹನ ಸವಾರರ ಮೇಲೆ ಟೋಲ್ ಸಿಬ್ಬಂದಿಗಳು ಸೇರಿ ಹಲ್ಲೆ ನಡೆಸುವ, ಗೂಂಡಾಗಿರಿ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇಲ್ಲಿ ಟೋಲ್ ವಸೂಲಿಗೆ ಅಯೋಗ್ಯವಾದ ಪ್ರದೇಶವಾಗಿದೆ. ಆದರೆ ಇದರ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಈ ಮಾರ್ಗವಾಗಿ ಸಂಚರಿಸುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಇದನ್ನೆಲ್ಲಾ ಕಂಡರೂ ಕಾಣದಂತೆ ಇದ್ದಾರೆ. ಈ ಬಗ್ಗೆ ಅವರು ಯಾವುದೇ ಕ್ರಮವಾಗಲಿ, ಪರಿಹಾರವಾಗಿ ಮಾಡುತ್ತಿಲ್ಲ. ಈ ಟೋಲ್ ಗೇಟ್ ನಿಂದ ಜಿಲ್ಲೆಯ ಜನರು ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಹ್ಮರಕೊಟ್ಲು ಟೋಲ್ ಗೇಟ್ ನಿಂದ ಜಿಲ್ಲೆಯ ಜನರಿಗೆ ಮುಕ್ತಿ ನೀಡುವಂತೆ ಇಂದು ಬಂಟ್ವಾಳಕ್ಕೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಲು ಪಕ್ಷದಿಂದ ತೀರ್ಮಾನಿಸಲಾಗಿದೆ ಎಂದು ಎಸ್ ಡಿಪಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಜೆಯ ವೇಳೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂಟ್ವಾಳದಿಂದ ಮಂಗಳೂರಿಗೆ ತೆರಳುವ ವೇಳೆ ಟೋಲ್ ಗೇಟ್ ನಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಒತ್ತಾಯಿಸಲಾಗುವುದು. ಪ್ರತಿಭಟನೆ ವೇಳೆ ಮುಖ್ಯಮಂತ್ರಿಗೆ ಇಲ್ಲಿನ ಅವ್ಯವಸ್ಥೆಯ ಬಗೆಗಿನ ಫೋಸ್ಟರ್ ಗಳನ್ನು ಪ್ರದರ್ಶಿಸಲು ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ತೀರ್ಮಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.