ಶಿಮಮೊಗ್ಗ: ಜಿಲ್ಲೆಯ ಹೊಳೆಹೊನ್ನೂರಿನ ಮಹಾತ್ಮಾ ಗಾಂಧಿ ವೃತ್ತದಲ್ಲಿರುವ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ಕೃತ್ಯವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ SDPI ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಇಮ್ರಾನ್, ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿರವರ ಪ್ರತಿಮೆ ಧ್ವಂಸ ಮಾಡಿದ ಗೋಡ್ಸೆ ಹಿಂಬಾಲಕರಿಗೆ ದೇಶದ್ರೋಹ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಲು ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ಹಲವು ವರ್ಷಗಳಿಂದ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿ ರವರ ಪ್ರತಿಮೆ ಸ್ಥಾಪನೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿ ಆ.20ರಂದು ಕೆಲ ದೇಶದ್ರೋಹಿಗಳು ಸೇರಿ ಮಹಾತ್ಮಾ ಗಾಂಧೀಜಿ ಪ್ರತಿಮೆ ರಾತ್ರೋರಾತ್ರಿ ಧ್ವಂಸ ಮಾಡಿ ದೇಶದ್ರೋಹ ಕೃತ್ಯ ಮೆರೆದಿದ್ದಾರೆ. ಇದರಿಂದ ನೈಜ ಭಾರತೀಯರ ಮನಸ್ಸಿಗೆ ಬಹಳ ನೋವಾಗಿದೆ. ಇದು ಸಹಿಸಲಾರದ ಕೃತ್ಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಹಿಂದೂ ಮಹಾಸಭಾ ಸಂಘಟನೆಯ ನಾಯಕಿ ಪೂಜಾ ಶಕುನ್ ಪಾಂಡೆ ಎಂಬ ನಾಥೂರಾಮ್ ಗೋಡ್ಸೆ ಹಿಂಬಾಲಕಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯ ಹೋರಾಟಗಾರ ರಾಜಿರಹಿತ ಹೋರಾಟಗಳನ್ನು ಮಾಡಿದವರಲ್ಲಿ ಒಬ್ಬರಾದ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿ ರವರ ಪುತ್ತಳಿ ಮಾಡಿಕೊಂಡು ದೇಶದ್ರೋಹಿ ಗೋಡ್ಸೆ ಸ್ಟೈಲಿನಲ್ಲಿ ಪಿಸ್ತೂಲು ಹಿಡಿದು ಗುಂಡಿಕ್ಕಿ ಸಂಭ್ರಮಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಚರ್ಚೆ ಕೂಡ ನಡೆದಿತ್ತು. ನಂತರ ಆ ದೇಶದ್ರೋಹಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಇಂತಹ ಮನಸ್ಥಿತಿಯ ಹಿಂದಿರುವ ಪಿಶಾಚಿಗಳನ್ನು ರಕ್ಷಣಾ ಇಲಾಖೆ ಕಡಿವಾಣ ಹಾಕಬೇಕಾಗಿದೆ ಎಂದು ಇಮ್ರಾನ್ ಮನವಿ ಮಾಡಿದ್ದಾರೆ.
ಕುವೆಂಪುರವರ ನಾಡು, ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ಶಿವಮೊಗ್ಗ ಜಿಲ್ಲೆಯು ಇಂತಹ ದೇಶದ್ರೋಹಿ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಈ ದೇಶದ್ರೋಹಿ ಟೆರರಿಸ್ಟ್ ಗುಂಪನ್ನು ದೇಶದ್ರೋಹ ಪ್ರಕರಣದಡಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಿ ಈ ಕೃತ್ಯದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ.