ಮಂಗಳೂರು ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಲು ಅವೈಜ್ಞಾನಿಕ, ಬೇಜವಾಬ್ದಾರಿ ಕಾಮಗಾರಿಯೇ ಕಾರಣ: ಎಸ್‌ ಡಿಪಿಐ ಆರೋಪ

Prasthutha|

ಮಂಗಳೂರು: ಮಂಗಳೂರು ನಗರದ ಬಹುತೇಕ ಕಡೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ನಗರದಲ್ಲಿ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿ ನೀರು ಮತ್ತು ಅದರೊಂದಿಗೆ ತ್ಯಾಜ್ಯನೀರು ಮುಖ್ಯ ರಸ್ತೆಯಲ್ಲಿಯೇ ಹರಿಯುತ್ತಿದ್ದು ಇದಕ್ಕೆ ಅವೈಜ್ಞಾನಿಕ ಮತ್ತು ಬೇಜವಾಬ್ದಾರಿ ಕಾಮಗಾರಿಯೇ ಪ್ರಮುಖ ಕಾರಣ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಅಕ್ಬರ್ ರಾಝಾ ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಗೊಳ್ಳುತ್ತಿರುವ ಮಂಗಳೂರು ನಗರದಲ್ಲಿ ಹಲವಾರು ಅವೈಜ್ಞಾನಿಕ ಕಾಮಗಾರಿಗಳಿಂದ ಪ್ರಯಾಣಿಕರು,ವಾಹನ ಸವಾರರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಅದರ ಮುಂದುವರಿದ ಭಾಗವಾಗಿ ಮಳೆ ಬಂದಾಗ ನಗರದ ಹಲವು ಪ್ರದೇಶದಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು,ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮುಖ್ಯ ರಸ್ತೆಯ ಮೇಲೆಯೇ ಮಳೆಯ ನೀರು ಹಾಗೂ ಚರಂಡಿ ನೀರು ಹರಿಯುತ್ತಿದೆ. ನಗರದಲ್ಲಿರುವ ರಾಜ ಕಾಲುವೆಗಳನ್ನು ಅಭಿವೃದ್ಧಿ ಪಡಿಸದೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಚರಂಡಿ ವ್ಯವಸ್ಥೆ ಹಾಗು ನೀರಿನ ಹರಿಯುವಿಕೆಗೆ ಅನುಗುಣವಾಗಿ ನಿರ್ಮಿಸದ ರಸ್ತೆಗಳಿಂದಾಗಿ  ತಗ್ಗು ಪ್ರದೇಶದಲ್ಲಿ ಹಲವಾರು ಮನೆಗಳಿಗೂ ನೀರು ನುಗ್ಗಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಯಾಗುವುದಲ್ಲದೆ ಮಲೇರಿಯಾದಂತಹ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ದಿನಕಳೆಯುತ್ತಿದ್ದಾರೆ.

ರಸ್ತೆ ಹಾಗು ಚರಂಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್ ಮಳೆ ನೀರು ಸಲೀಸಾಗಿ ಹರಿದು ಹೋಗುವ ರಸ್ತೆಗಳನ್ನು ನಿರ್ಮಿಸದಿರುವುದು ಹಾಗೂ ಮಳೆ‌ ನೀರು ಹರಿದು ಹೋಗುವ ಚರಂಡಿಗಳು ಸಮರ್ಪಕವಾಗಿ ಇಲ್ಲದೆ ಇರುವುದು ಈ ಸಮಸ್ಯೆಗಳಿಗೆ ಮೂಲ  ಕಾರಣವಾಗಿದೆ. ಇದಲ್ಲದೆ ನಗರದ ಹಲವು ಕಡೆಗಳಲ್ಲಿ ಮಳೆ ನೀರು ಒಳಚರಂಡಿಗಳಲ್ಲಿ(ಡ್ರೈನೇಜ್) ಹರಿಯುತ್ತಿದ್ದು ಇದು ಬಹಳ ಅಪಾಯಕಾರಿ ಆಗಿದೆ, ವಾಹನಗಳ ಸಂಚಾರದ ವೇಳೆ ಮಳೆ ನೀರಿನ ಜೊತೆಗೆ ಒಳಚರಂಡಿ ನೀರಿನ ಮಲಿನವನ್ನು ಅನುಭವಿಸುವಂತಾಗಿದೆ.

- Advertisement -

ಕೂಡಲೇ ಮನೆಗಳಿಂದ ಹಾಗೂ ಮುಖ್ಯ ರಸ್ತೆಗಳಿಂದ ಮಳೆ‌ ನೀರು ಹಾಗೂ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಬೇಕು , ಇಂತಹ ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ಏನಾದರೂ ಪ್ರಾಣಹಾನಿ ಸಂಭವಿಸಿದರೆ ಅದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಗಳನ್ನು ನೇರ ಹೊಣೆ ಮಾಡಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು   ಅಕ್ಬರ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp