ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ಪಕ್ಷದ ಕಾರ್ಯಕರ್ತರ ಸಮಾವೇಶವು ಬೆಳ್ತಂಗಡಿ ಸಿ,ವಿ,ಸಿ ಹಾಲಿನಲ್ಲಿ ಜರುಗಿದ್ದು, ಸಭೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ನಿಸಾರ್ ಕುದ್ರಡ್ಕ ರವರು ವಹಿಸಿದ್ದರು
ಮುಖ್ಯ ಅತಿಥಿಯಾಗಿ ಆಗಮಿಸಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಗಳಾದ ರಿಯಾಝ್ ಪರಂಗಿ ಪೇಟೆ ಮಾತನಾಡಿ , ರಾಜ್ಯ ಬಿಜೆಪಿಯು ನಿರಂಕುಶವಾದದ ಧೋರಣೆಗಳನ್ನು ಎಸಗುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಕಾಂಗ್ರೆಸ್, ಜೆಡಿಎಸ್ ಮತ್ತು ಆಮ್ ಆದ್ಮಿಗಳಂತಹ ಜಾತ್ಯಾತೀತ ಪಕ್ಷಗಳು ಮೌನದಿಂದಿರುವುದು ಖಂಡನಾರ್ಹ. ಮುಸ್ಲಿಮರ, ದಲಿತರ ,ಕ್ರೈಸ್ತರ ಮತಗಳನ್ನು ಪಡೆದು ಅಧಿಕಾರಕ್ಕೇರಿ ಆ ಬಳಿಕ ಬಿಜೆಪಿಗೆ ಮಾರಾಟವಾಗುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ಕರ್ಮಕಾಂಡವನ್ನು ಜನತೆಗೆ ತಿಳಿಪಡಿಸಬೇಕಾಗಿದೆ.
ಆಮ್ ಆದ್ಮಿ ಎಂಬ ಪಕ್ಷವು ಹುಸಿ ಜಾತ್ಯಾತೀತ ಚಿಂತನೆಯಿಂದ ಕೂಡಿದ್ದು, ಬಾಬರಿ ಮಸೀದಿ ನಿಲುವಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿ ಮುಸ್ಲಿಮರಿಗೆ ದ್ರೋಹಬಗೆದಿರುವ ವಿಚಾರ ಋಜುವಾತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಜಿಲ್ಲೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಅದರಲ್ಲಿ ಬೆಳ್ತಂಗಡಿಯೂ ಒಂದಾಗಿದೆ. ಪರ್ಯಾಯ ರಾಜಕೀಯ ವ್ಯವಸ್ಥೆ ಎಸ್ ಡಿ ಪಿ ಐ ಅನಿವಾರ್ಯತೆ ಕುರಿತು ಜನರಿಗೆ ಮನವರಿಕೆ ಮಾಡುವ ಮೂಲಕ ಬೆಳ್ತಂಗಡಿಯಲ್ಲಿ ನಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸುವ ಶತ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕು. ಪ್ರತಿಯೊಂದು ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ನೆರೆದಿರುವ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ “ಪ್ರಸ್ತುತ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷವು ಮತ್ತು ಅದರ ಧುರೀಣರು ಸಂಪೂರ್ಣವಾಗಿ ಭ್ರಷ್ಟಾಚಾರ, ಮಿತಿಮೀರಿದ ಕೋಮುವಾದ ಚಿಂತನೆಗಳಂತಹ ಅರಾಜಕತೆಯಲ್ಲಿ ಮುಳುಗಿಹೋಗಿದ್ದಾರೆ. ಈ ಎಲ್ಲಾ ಸತ್ಯದ ಸಂಗತಿಗಳನ್ನು ಪಕ್ಷದ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ಎಳೆಎಳೆಯಾಗಿ ಬಿಚ್ಚಿಡುವ ಮೂಲಕ ಭಾಜಪಾವನ್ನು ಅಧಿಕಾರದಿಂದ ನಿರ್ಮೂಲನೆ ಮಾಡುವಲ್ಲಿ ನಿರತರಾಗಬೇಕು” ಎಂದು ಹೇಳಿದರು. ಪ್ರಸ್ತಾವಿಕ ಮಾತುಗಳನ್ನು ಆಡಿದ ಎಸ್ ಡಿ ಪಿ ಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪಕ್ಷದ ಬೆಳವಣಿಗೆ ಮತ್ತು ಪ್ರಸ್ತುತ ಆಗುಹೋಗುಗಳು ಮತ್ತು ಇಂದು ದೇಶಕ್ಕೆ ಅಪಾಯವಾಗಿರುವ ಫ್ಯಾಸಿಸಂ ಸಿದ್ದಾಂತದ ವಿರುದ್ಧ ರಾಜಿರಹಿತ ಹೋರಾಟದ ಅಗತ್ಯತೆ ಬಗ್ಗೆ ಹೇಳಿದರು
ಈ ಸಂದರ್ಭದಲ್ಲಿ ನಿರಂತರವಾಗಿ ಸಮಾಜಮುಖಿ ಸೇವೆಗಳನ್ನು ಮಾಡುವ ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಇವರನ್ನು ಬೆಳ್ತಂಗಡಿ ಕ್ಷೇತ್ರ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು ದ.ಕ ಜಿಲ್ಲಾ ಸಮಿತಿ ಸದಸ್ಯರುಗಳಾದ ನವಾಝ್ ಶರೀಫ್ ಕಟ್ಟೆ ಅಥಿತಿಗಳನ್ನು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದರು,ನಿಸಾರ್ ಎಸ್ ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಷೇತ್ರ ಕಾರ್ಯದರ್ಶಿ ನಿಝಾಮ್ ಗೇರುಕಟ್ಟೆ ಧನ್ಯವಾದ ಸಮರ್ಪಿಸಿದರು. ಕ್ಷೇತ್ರ ಸಮಿತಿ ನಾಯಕರಾದ ಹನೀಫ್ ಪೂಂಜಾಲಕಟ್ಟೆ , ಇನಾಸ್ ರೋಡ್ರಿಗಸ್ ಹಾಗೂ ಅಬ್ದುಲ್ ಅಝೀಝ್ ಝುಹರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು