ಸಕಲೇಶಪುರ: ತಾಲೂಕಿನ ಆನೆಮಹಲ್ ಗ್ರಾಮ ಪಂಚಾಯಿತ್ ನ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಮತದಾನ ನಡೆದಿದ್ದು, ಅಧ್ಯಕ್ಷರಾಗಿ SDPI ಬೆಂಬಲಿತ ಅಭ್ಯರ್ಥಿ ಅಶ್ರಫ್ ಕೋಟೆ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ನ ಚನ್ನಮ್ಮ ಆಯ್ಕೆಯಾಗಿದ್ದಾರೆ.
ಹತ್ತು ಮಂದಿ ಸದಸ್ಯರ ಸಂಖ್ಯಾ ಬಲದ ಆನೆಮಹಲ್ ಗ್ರಾಮ ಪಂಚಾಯಿತ್ ಅಧ್ಯಕ್ಷ ಸ್ಥಾನಕ್ಕೆ SDPI ನಿಂದ ಅಶ್ರಫ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಹಸೈನಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಚೆನ್ನಮ್ಮ ನಾಮಪತ್ರ ಸಲ್ಲಿಸಿದ್ದರು.
ಗ್ರಾಮ ಪಂಚಾಯತ್ ನಲ್ಲಿ ಎಸ್ ಡಿಪಿಐ ಎರಡು ಸ್ಥಾನ ಹೊಂದಿದೆ. ಎಸ್ ಡಿಪಿಐ, ಕಾಂಗ್ರೆಸ್, ಮತ್ತು ಬಂಡಾಯ ಜೆಡಿಎಸ್ ಅಭ್ಯರ್ಥಿಗಳು ಮೈತ್ರಿ ಮಾಡಿಕೊಂಡಿದ್ದು, ಇದರ ಅನುಸಾರ ತಲಾ 10 ತಿಂಗಳ ಅಧಿಕಾರ ಎಂದು ತೀರ್ಮಾನಿಸಲಾಗಿತ್ತು. ಅದರಂತೆ ಇದೀಗ ಎಸ್ ಡಿಪಿಐಗೆ ಅಧಿಕಾರ ಸಿಕ್ಕಿದೆ.
ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳಿಗೂ ತಲಾ 5 ಮತಗಳು ಸಿಕ್ಕಿದ ಹಿನ್ನೆಲೆಯಲ್ಲಿ ಚೀಟಿ ಎತ್ತಲಾಯಿತು. ಅದರಂತೆ ಎಸ್ ಡಿಪಿಐ ಅಭ್ಯರ್ಥಿ ಅಶ್ರಫ್ ಅವರನ್ನು ಅಧ್ಯಕ್ಷ ಎಂದು ಘೋಷಿಸಲಾಯಿತು.
ಚುನಾವಣಾ ಅಧಿಕಾರಿಯಾಗಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಹರೀಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಘು, ಕಾರ್ಯದರ್ಶಿ ವಿರೇಶ್ ಸೇರಿದಂತೆ ಇನ್ನಿತರರು ಇದ್ದರು.
ಗ್ರಾಮ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷರಾಗಿ ತಿಮ್ಮಯ್ಯ ಉಪಾಧ್ಯಕ್ಷರಾಗಿ ನೂರಾ ಸಲೀಮ್ ಸೇವೆ ಸಲ್ಲಿಸಿದ್ದರು.