ಉಳ್ಳಾಲ ನಗರಸಭಾ ಚುನಾವಣೆ: ಜೆ.ಡಿ.ಎಸ್- ಬಿಜೆಪಿ ಮೈತ್ರಿಗೆ ಬೆಂಬಲ ನಿರಾಕರಿಸಿದ ಎಸ್.ಡಿ.ಪಿ.ಐ: ನಗರ ಸಭೆ ಕಾಂಗ್ರೆಸ್ ವಶಕ್ಕೆ

ಉಳ್ಳಾಲ: ಉಳ್ಳಾಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ 6 ಸೀಟುಗಳ ಬಲವನ್ನು ಹೊಂದಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಜೆಡಿಎಸ್-ಬಿಜೆಪಿ ಮೈತ್ರಿಗೆ ಬೆಂಬಲವನ್ನು ನಿರಾಕರಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದೆ. ಇದರೊಂದಿಗೆ 31 ಸಂಖ್ಯಾಬಲದ ಉಳ್ಳಾಲ ನಗರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗೆದ್ದುಕೊಂಡಿದೆ.

ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಚಿತ್ರಕಲಾ ಚಂದ್ರಕಾಂತ್ 15 ಮತಗಳೊಂದಿಗೆ ಮತ್ತು ಉಪಾಧ್ಯಕ್ಷರಾಗಿ ಅದೇ ಪಕ್ಷದ ಅಯೂಬ್ ಮಂಚಿಲ 14 ಮತಗಳೊಂದಿಗೆ  ಜಯಗಳಿಸಿದ್ದಾರೆ.

- Advertisement -

13 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿರುವ ನಗರ ಸಭೆಯಲ್ಲಿ, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಥಳೀಯ ಶಾಸಕರು ಮತ್ತು ಪಕ್ಷೇತರ ಅಭ್ಯರ್ಥಿಯ ಮತಗಳ ಬೆಂಬಲದೊಂದಿಗೆ 15 ಮತಗಳನ್ನು ಪಡೆದುಕೊಂಡಿತು.  6 ಸೀಟುಗಳನ್ನು ಹೊಂದಿದ್ದ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕಾಗಿ ರೇಶ್ಮಾ ಸ್ಪರ್ಧಿಸಿದ್ದರು. ಅದೇವೆಳೆ, ಬಿಜೆಪಿ  ತನ್ನ ಮಿತ್ರ ಜೆಡಿಎಸ್ ನ 4 ಮತ ಮತ್ತು ಸ್ಥಳೀಯ ಸಂಸದರ 1 ಮತದ ನೆರವಿನೊಂದಿಗೆ ಒಟ್ಟು 11 ಮತಗಳನ್ನು ಪಡೆದಿತ್ತು. ಇನ್ನುಳಿದಂತೆ ಎಸ್.ಡಿ.ಪಿ.ಐ ಬೆಂಬಲಿತ ಝರಿನಾ ರವೂಫ್ 6 ಮತಗಳನ್ನು ಪಡೆದಿದ್ದರು.

ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಜಬ್ಬಾರ್ ಸ್ಪರ್ಧಿಸಿದ್ದು, ಈ ಸ್ಥಾನವನ್ನು ಗೆಲ್ಲಲು ತನ್ನನ್ನು ಬೆಂಬಲಿಸಬೇಕೆಂದು ಎಸ್.ಡಿ.ಪಿ.ಐಯನ್ನು ತೀವ್ರವಾಗಿ ಆಗ್ರಹಿಸಿತ್ತು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಸುವುದಕ್ಕಾಗಿ ಜೆಡಿಎಸ್ ನ ಈ ಕೋರಿಕೆಯನ್ನು ಎಸ್.ಡಿ.ಪಿ.ಐ ಕಡಾಖಂಡಿತವಾಗಿ ನಿರಾಕರಿಸಿತ್ತು. ಇದರಿಂದಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಒಂದು ಮತದ ಬೆಂಬಲದೊಂದಿಗೆ ಕಾಂಗ್ರೆಸ್ 14 ಮತಗಳೊಂದಿಗೆ ಗೆದ್ದಿದೆ. ಜೆಡಿಎಸ್ ಅಭ್ಯರ್ಥಿ 12 ಮತಗಳೊಂದಿಗೆ ಸೋಲನ್ನಪ್ಪಿದರು. ಸ್ವತಂತ್ರವಾಗಿ ಸ್ಪರ್ಧಿಸಿದ ಎಸ್.ಡಿ.ಪಿ.ಐ ಅಭ್ಯರ್ಥಿ 6 ಮತಗಳನ್ನು ಪಡೆದರು.

- Advertisement -