ಉಳ್ಳಾಲ: ಉಳ್ಳಾಲ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ 6 ಸೀಟುಗಳ ಬಲವನ್ನು ಹೊಂದಿದ್ದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಜೆಡಿಎಸ್-ಬಿಜೆಪಿ ಮೈತ್ರಿಗೆ ಬೆಂಬಲವನ್ನು ನಿರಾಕರಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದೆ. ಇದರೊಂದಿಗೆ 31 ಸಂಖ್ಯಾಬಲದ ಉಳ್ಳಾಲ ನಗರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ಗೆದ್ದುಕೊಂಡಿದೆ.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ಚಿತ್ರಕಲಾ ಚಂದ್ರಕಾಂತ್ 15 ಮತಗಳೊಂದಿಗೆ ಮತ್ತು ಉಪಾಧ್ಯಕ್ಷರಾಗಿ ಅದೇ ಪಕ್ಷದ ಅಯೂಬ್ ಮಂಚಿಲ 14 ಮತಗಳೊಂದಿಗೆ ಜಯಗಳಿಸಿದ್ದಾರೆ.
13 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿರುವ ನಗರ ಸಭೆಯಲ್ಲಿ, ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಥಳೀಯ ಶಾಸಕರು ಮತ್ತು ಪಕ್ಷೇತರ ಅಭ್ಯರ್ಥಿಯ ಮತಗಳ ಬೆಂಬಲದೊಂದಿಗೆ 15 ಮತಗಳನ್ನು ಪಡೆದುಕೊಂಡಿತು. 6 ಸೀಟುಗಳನ್ನು ಹೊಂದಿದ್ದ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕಾಗಿ ರೇಶ್ಮಾ ಸ್ಪರ್ಧಿಸಿದ್ದರು. ಅದೇವೆಳೆ, ಬಿಜೆಪಿ ತನ್ನ ಮಿತ್ರ ಜೆಡಿಎಸ್ ನ 4 ಮತ ಮತ್ತು ಸ್ಥಳೀಯ ಸಂಸದರ 1 ಮತದ ನೆರವಿನೊಂದಿಗೆ ಒಟ್ಟು 11 ಮತಗಳನ್ನು ಪಡೆದಿತ್ತು. ಇನ್ನುಳಿದಂತೆ ಎಸ್.ಡಿ.ಪಿ.ಐ ಬೆಂಬಲಿತ ಝರಿನಾ ರವೂಫ್ 6 ಮತಗಳನ್ನು ಪಡೆದಿದ್ದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಜಬ್ಬಾರ್ ಸ್ಪರ್ಧಿಸಿದ್ದು, ಈ ಸ್ಥಾನವನ್ನು ಗೆಲ್ಲಲು ತನ್ನನ್ನು ಬೆಂಬಲಿಸಬೇಕೆಂದು ಎಸ್.ಡಿ.ಪಿ.ಐಯನ್ನು ತೀವ್ರವಾಗಿ ಆಗ್ರಹಿಸಿತ್ತು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವುಳಿಸುವುದಕ್ಕಾಗಿ ಜೆಡಿಎಸ್ ನ ಈ ಕೋರಿಕೆಯನ್ನು ಎಸ್.ಡಿ.ಪಿ.ಐ ಕಡಾಖಂಡಿತವಾಗಿ ನಿರಾಕರಿಸಿತ್ತು. ಇದರಿಂದಾಗಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಒಂದು ಮತದ ಬೆಂಬಲದೊಂದಿಗೆ ಕಾಂಗ್ರೆಸ್ 14 ಮತಗಳೊಂದಿಗೆ ಗೆದ್ದಿದೆ. ಜೆಡಿಎಸ್ ಅಭ್ಯರ್ಥಿ 12 ಮತಗಳೊಂದಿಗೆ ಸೋಲನ್ನಪ್ಪಿದರು. ಸ್ವತಂತ್ರವಾಗಿ ಸ್ಪರ್ಧಿಸಿದ ಎಸ್.ಡಿ.ಪಿ.ಐ ಅಭ್ಯರ್ಥಿ 6 ಮತಗಳನ್ನು ಪಡೆದರು.