ಇಳಂತಿಲ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಎಸ್‌ಡಿಪಿಐ ಮನವಿ

Prasthutha|

ಬೆಳ್ತಂಗಡಿ: ಬೆಳ್ತಂಗಡಿ ಇಳಂತಿಲ ಗ್ರಾಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಾಗರೀಕರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಿ ಕೊಡುವಂತೆ ಇಳಂತಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ ನೀಡಲಾಯಿತು.

- Advertisement -

ಇಳಂತಿಲ ಗ್ರಾಮದ ವಾರ್ಡ್‌ ಸಂಖ್ಯೆ ನಾಲ್ಕು ಕಡವಿನ ಬಾಗಿಲು ಹಾಗೂ ವಿನಾಯಿ ನಗರದ ಇನ್ನೂರಕ್ಕೂ ಅಧಿಕ ಮನೆಗಳಿಗೆ ಹಲವಾರು ವರ್ಷಗಳಿಂದ ಯಾವುದೇ ಶುದ್ದೀಕರಣ ಘಟಕವಿಲ್ಲದ ಕಲುಷಿತ ನೀರು ನೇತ್ರಾವತಿ ನದಿಯಿಂದ ನೇರ ಪೂರೈಕೆಯಾಗುತಿದೆ. ಅಂಗನವಾಡಿ ಕೇಂದ್ರದ ಸಣ್ಣ ಮಕ್ಕಳು ಹಾಗೂ ವಯಸ್ಕರು, ಗರ್ಭಿಣಿ ಮಹಿಳೆಯರಿಗೆ ಆರೋಗ್ಯದಲ್ಲಿ ಅತಿಯಾದ ಸಮಸ್ಯೆ ಕಾಣುತಿದ್ದು, ಅಪಾಯಕಾರಿ ನೀರನ್ನೇ ಉಪಯೋಗ ಮಾಡುತಿದ್ದಾರೆ. ಇದರ ಬಗ್ಗೆ ವಾರ್ಡ್ ಸಭೆ,ಗ್ರಾಮ ಸಭೆ ಮತ್ತು ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿಸುತ್ತಿದ್ದಾರೆ. ಒಂದು ವಾರದೊಳಗಾಗಿ ನೀರಿನ ಈ ದೊಡ್ಡ ಮಟ್ಟದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶೀಘ್ರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಗ್ರಾಮಸ್ಥರಿಗೆ ಪರಿಹಾರ ದೋರಕಿಸಬೇಕಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ನಿಸಾರ್ ಕುದ್ರಡ್ಕ, ಕಡವಿನ ಬಾಗಿಲು ಬೂತ್ ಸಮಿತಿ ಅಧ್ಯಕ್ಷ ಅಝೀಝ್, ಕಾರ್ಯದರ್ಶಿ ಅನ್ವರ್, ಕಣಿಯೂರು ಬ್ಲಾಕ್ ಸಮಿತಿ ಉಪಾಧ್ಯಕ್ಷ ರಝಾಕ್ ಕುದ್ರಡ್ಕ. ಸದಸ್ಯರಾದ ಫರ್ಹಾನ್, ಸ್ವಾಲಿ ಉಪಸ್ಥಿತರಿದ್ದರು.