‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಪುಂಡಾಟಿಕೆಯನ್ನು ನಿಯಂತ್ರಿಸಿ’: ಸರಕಾರಕ್ಕೆ SDPI ಎಚ್ಚರಿಕೆ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಪುಂಡಾಟಿಕೆಯನ್ನು ನಿಯಂತ್ರಿಸಬೇಕೆಂದು ಸರಕಾರಕ್ಕೆ SDPI ಒತ್ತಾಯಿಸಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳ ಹಿಂದೆ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ಕಾಣದ ಕೈಗಳು ಕೆಲಸ ಮಾಡುತ್ತಿದೆ .ಹಲವಾರು ಸಮಯಗಳಿಂದ ಶಾಂತಿಯಿಂದ ಇದ್ದ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ರಾಜಕೀಯ ಮೈಲೇಜ್ ಗಳಿಸುವ ನಿಟ್ಟಿನಲ್ಲಿ ಕೋಮು ಭಾವನೆಗಳನ್ನು ಕೆರಳಿಸಿ ತನ್ನ ಮತ ಬ್ಯಾಂಕ್ ಭದ್ರ ಗೊಳಿಸಲು ಬಿಜೆಪಿ ಮುಖಂಡರ ಅಣತಿಯಂತೆ ಕಿಡಿಗೇಡಿಗಳು ಸಮಾಜದ ಶಾಂತಿ ಕದಡುವ ದುಷ್ಕ್ರತ್ಯದಲ್ಲಿ ತೊಡಗಿ ಕೊಂಡಿದ್ದಾರೆ . ಸರಕಾರ ಹಾಗೂ ಸಂಬಂದಪಟ್ಟ ಇಲಾಖೆ ಕೂಡಲೆ ಮಧ್ಯಪ್ರವೇಶಿಸಿ ಸಮಾಜ ವಿರೋಧಿ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಟ್ಟು ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸರಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ ಅವರು, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಂಘಪರಿವಾರದ ಗೂಂಡಾಗಳು ಅಲ್ಪಸಂಖ್ಯಾತರನ್ನು ದಲಿತರನ್ನು ಗುರಿಪಡಿಸಿಕೊಂಡು ನಡೆಸುವ ದಾಳಿಗಳು ಇಂದು ಬುದ್ದಿವಂತರ,ವಿದ್ಯಾವಂತರ ಜಿಲ್ಲೆಯೆಂದು ದೇಶದಲ್ಲೇ ಗೌರವ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವುದಕ್ಕೆ ಸರಕಾರದ ನಿರ್ಲಕ್ಷ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಮೌನವಾಗಿದೆ ಎಂದು SDPI ಆರೋಪಿಸಿದ್ದಾರೆ.

- Advertisement -


ಆಯುಧ ಪೂಜೆಯ ಹೆಸರಿನಲ್ಲಿ ಭಜರಂಗದಳದ ಮುಖಂಡರು ಹರಿತವಾದ ತ್ರಿಶೂಲಗಳನ್ನು ಹಂಚುವ ಮೂಲಕ ಸಂಘವರಿವಾರವು ಗಲಭೆ, ಗುಂಪು ಘರ್ಷಣೆ, ಚೂರಿ ಇರಿತಕ್ಕೆ ಮುನ್ನುಡಿ ಬರೆದಿದೆ, ಅದರ ಮುಂದುವರಿದ ಭಾಗವಾಗಿ ಅನೈತಿಕ ಪೊಲೀಸ್ ಗಿರಿ ನಿತ್ಯ ನಿರಂತರವಾಗುತ್ತಿದೆ, ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲ್ ನಲ್ಲಿ ಅಮಾಯಕ ಮುಸ್ಲಿಂ ಸಹೋದರರಿಬ್ಬರ ಮೇಲೆ ಬಿಜೆಪಿ ಮುಖಂಡನಿಂದ ತಳವಾರು ಮತ್ತು ತ್ರಿಶೂಲದಿಂದ ದಾಳಿ ,ಗಂಜೀಮಠದ ಮನಾಲದಲ್ಲಿ ಯುವಕನ ಮೇಲೆ ಹಲ್ಲೆ , ಮಂಗಳೂರಿನಲ್ಲಿ ಮುಸ್ಲಿಂ ಮಾಲಕತ್ವದ ಸಾರಿಗೆ ಬಸ್ಸಿನ ಮೇಲೆ ಕಲ್ಲು ತೂರಾಟ, ಮಾಣಿಯಲ್ಲಿ ನಡೆದ ಅಪಘಾತ ವೊಂದನ್ನು ನೆಪವಾಗಿಸಿ ಮುಸ್ಲಿಂ ಯುವಕನ ಮೇಲೆ ಪೊಲೀಸರ ಸಮ್ಮುಖದಲ್ಲೇ ನಡೆದ ಗುಂಪು ಹಲ್ಲೆ, ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ABVP ಹಾಗೂ ಸ್ಥಳೀಯ ಭಜರಂಗದಳದ ಗೂಂಡಾಗಳಿಂದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ತ್ರಿಶೂಲ ದಾಳಿ ನಡೆದಿದ್ದು, ಈ ಘಟನೆಯಿಂದ ದಾಳಿಗೊಳಗಾದ ವಿದ್ಯಾರ್ಥಿಗಳು, ಯುವಕರು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಘಟನೆಗಳು ಸಂಘಪರಿವಾರ ಹಾಗೂ ಬಿಜೆಪಿ ನಾಯಕರ ಪೂರ್ವಯೋಚಿತ ಕೃತ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ಜಿಲ್ಲೆಯಲ್ಲಿ ವ್ಯವಸ್ಥಿತ ಗಲಭೆಯ ಮುನ್ಸೂಚನೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.


ಆಯುಧ ಪೂಜೆಯ ಹೆಸರಿನಲ್ಲಿ ಭಜರಂಗದಳ ತ್ರಿಶೂಲ ದೀಕ್ಷೆ ನಡೆಸಿದಾಗಲೇ ಆಯೋಜಕರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು SDPI ಜಿಲ್ಲಾಡಳಿತದ ಮೇಲೆ ಒತ್ತಡ ಹೇರಿತ್ತು . ಆದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಮೃದು ಧೋರಣೆಯ ಪರಿಣಾಮ ಇಂದು ಜಿಲ್ಲೆಯ ಜನತೆ ಅನುಭವಿಸುತ್ತಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳೊಂದಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತದೆ ಎಂಬ ಸಂಘಪರಿವಾರದ ಸಂಸ್ಕೃತಿಯಲ್ಲಿ ಮಾತನಾಡಿದ ನಂತರ ಜಿಲ್ಲೆಯಲ್ಲಿ ಬಹುತೇಕ ವ್ಯವಸ್ಥಿತ ರೀತಿಯಲ್ಲಿ ದಾಳಿಗಳು ನಡೆದಿದೆ. ಜಿಲ್ಲೆಯ ಉನ್ನತ ಸ್ಥಾನದಲ್ಲಿರುವ ಮಾನ್ಯ ಜಿಲ್ಲಾಧಿಕಾರಿ ಗಳ ಕೊರಳ ಪಟ್ಟಿ ಹಿಡಿಯುತ್ತೇವೆ, ಮಹಿಳಾ ಸಬ್ ಇನ್ಸ್ಪೆಕ್ಟರ್ ರವರ ಕಾಲು ಮುರಿಯುತ್ತೇವೆ ಎಂದು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹಿಂದೂ ಸಂಘಟನೆಯ ನಾಯಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವಾಗ ಅವರ ವಿರುದ್ಧ ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಈ ರೀತಿಯ ಅವಮಾನಗಳು-ಬೆದರಿಕೆಗಳಾದರೆ ಜಿಲ್ಲೆಯ ಜನಸಾಮಾನ್ಯರ ಪಾಡೇನು? ಎಂದು ಅವರು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಇಷ್ಟೆಲ್ಲಾ ಗಂಭೀರ ಸ್ವರೂಪದ ವ್ಯವಸ್ಥಿತ ಷಡ್ಯಂತ್ರಗಳು ನಡೆಯುತ್ತಿರುವಾಗ ಸರಕಾರ ಮತ್ತು ಪೊಲೀಸ್ ಇಲಾಖೆ ನಿಷ್ಕ್ರಿಯ ಧೋರಣೆ ತಳೆಯುವುದಾದರೆ SDPI ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ . ಭಾರತದಲ್ಲಿ ಬದುಕುವ ಎಲ್ಲಾ ಭಾರತೀಯರಿಗೆ ಕಾನೂನು ಒಂದೇ ರೀತಿಯಲ್ಲಿ ಅನ್ವಯಿಸುತ್ತದೆ, ಸರಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಧೋರಣೆಯಿಂದ ಹೊರ ಬರಬೇಕು ಇಲ್ಲದಿದ್ದರೆ ಜಿಲ್ಲೆಯಲ್ಲಿ ಏನಾದರೂ ಅನಾಹುತ ಅಥವಾ ಅರಾಜಕತೆ ಸೃಷ್ಟಿಯಾದರೆ ಅದಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಸಿದ್ದಾರೆ.

Join Whatsapp