ಬೆಂಗಳೂರು: ಹೊಸಕೆರೆಹಳ್ಳಿ ಬಳಿಯ ನೈಸ್ ರಸ್ತೆಯಲ್ಲಿ ಸ್ಕೂಟರ್ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಸುಲೋಚನಾ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಹೊಸಕೆರೆಹಳ್ಳಿಯ ನೈಸ್ ರಸ್ತೆಯಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಫ್ಟ್’ವೇರ್ ಇಂಜಿನಿಯರ್ ಸುಲೋಚನಾ (24) ಸಾವನ್ನಪ್ಪಿದ್ದಾರೆ ಎಂದು ಡಿಸಿಪಿ ಸುಮನ್ ಪನ್ನೇಕರ್ ತಿಳಿಸಿದ್ದಾರೆ.
ಕೋರಮಂಗಲದಿಂದ ಹೊಸಕೆರೆಹಳ್ಳಿ ಕಡೆಗೆ ಸುಲೋಚನಾ ಮತ್ತು ಆಕೆಯ ಸ್ನೇಹಿತ ಆನಂದ್ ಹೋಗುತ್ತಿದ್ದರು. ಈ ವೇಳೆ ಸ್ನೇಹಿತ ಆನಂದ್ ಪೂರ್ಣ ಹೆಲ್ಮೇಟ್ ಧರಿಸಿದ್ದು, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರು. ನೈಸ್ ರಸ್ತೆಯ ಮಾರ್ಗಮಧ್ಯೆ ಸ್ಕೂಟರ್’ನ ಟೈರ್ ಸ್ಫೋಟಗೊಂಡು ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಹೋಗಿ ಡಿಕ್ಕಿ ಹೊಡೆದು ಇಬ್ಬರೂ ಬಿದ್ದಿದ್ದಾರೆ.
ಬಿದ್ದ ರಭಸಕ್ಕೆ ಇಬ್ಬರಿಗೂ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿತ್ತು. ಇಬ್ಬರೂ ಗಾಯಾಳುಗಳು ತೀವ್ರ ರಕ್ತಸ್ರಾವ ಉಂಟಾಗಿ ರಸ್ತೆ ಬದಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ನರಳುತ್ತಿದ್ದರು. ಇನ್ನು ಸ್ಕೂಟರ್ ಸವಾರರು ಗಾಯಗೊಂಡು ಬಿದ್ದಿರುವುದನ್ನು ಕಂಡ ದಾರಿಹೋಕರು ಗಮನಿಸಿ ಹತ್ತಿರದ ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುಲೋಚನಾ ಅರ್ಧ ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ತೀವ್ರ ಹೊಡೆತ ಬಿದ್ದಿದ್ದು, ಕಿವಿಯಲ್ಲಿಯೂ ರಕ್ತಸ್ರಾವ ಉಂಟಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಸುಲೋಚನಾ ಇಂದು ಬೆಳಗ್ಗಿನ ವೇಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.ನಂತರ ಸುಲೋಚನಾ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸುಲೋಚನಾಳೊಂದಿಗೆ ಹೋಗುತ್ತಿದ್ದ ಇಂಜಿನಿಯರ್ ಆನಂದ್ ದೊಡ್ಡ ಹೆಲ್ಮೆಟ್ ಧರಿಸಿದ್ದರಿಂದ ಅವರು ನೆಲಕ್ಕೆ ಬಿದ್ದರೂ ತಲೆಗೆ ಹೆಚ್ಚಿನ ಗಾಯವಾಗಿಲ್ಲ. ಆದರೆ, ಎದೆ ಮತ್ತು ದೇಹದ ಇತರೆ ಭಾಗಗಳಿಗೆ ಗಂಭೀರ ಗಾಯವಾಗಿದ್ದು, ಒಂದು ಕಡೆ ಕೈ ಮುರಿತವಾಗಿದೆ. ಅವರ ಸ್ಥಿತಿಯೂ ಕೂಡ ಗಂಭೀರವಾಗಿದೆ. ಸುಲೋಚನಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು