ಕೊಚ್ಚಿ : ಪ್ರಸ್ತಾಪಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ವಿದೇಯಕ ೨೦೨೧ (ಎಲ್ ಡಿಎಆರ್) ತುಂಬಾ ಸಮಸ್ಯಾತ್ಮಕವಾಗಿದೆ ಮತ್ತು ಲಕ್ಷದ್ವೀಪದ ಪರಿಸರ, ಜೀವನ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದಕ್ಕೆ ಇರುವ ಕಾನೂನು ಅವಕಾಶಗಳ ವಿರುದ್ಧ ಕಾರ್ಯ ನಿರ್ವಹಿಸಲಿದೆ ಎಂದು ದ್ವೀಪಗಳಲ್ಲಿ ವರ್ಷಗಳಿಂದ ಸೇವೆ ಸಲ್ಲಿಸಿದ ವಿವಿಧ ಸಂಸ್ಥೆಗಳ ವಿಜ್ಞಾನಿಗಳ ಒಕ್ಕೂಟ ʼಲಕ್ಷದ್ವೀಪ ರಿಸರ್ಚ್ ಕಲೆಕ್ಟಿವ್ʼ ಅಭಿಪ್ರಾಯ ಪಟ್ಟಿದೆ.
ಲಕ್ಷದ್ವೀಪ ರಿಸರ್ಚ್ ಕಲೆಕ್ಟಿವ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಸುಮಾರು ೬೦ಕ್ಕೂ ಹೆಚ್ಚು ಮಂದಿ ವಿಜ್ಞಾನಿಗಳ ಸಮೂಹ ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರವನ್ನು ಬರೆದಿದೆ. ಈ ವಿದೇಯಕದ ಕರಡು ಹಿಂಪಡೆಯಲು ಮಧ್ಯಪ್ರವೇಶಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ವಿನಂತಿಸಿದೆ.
ಎಲ್ ಡಿಎಆರ್ ಜಾರಿಗೊಳಿಸುವಿಕೆಯ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿರುವುದಾಗಿ ಲಕ್ಷದ್ವೀಪ ರಿಸರ್ಚ್ ಕಲೆಕ್ಟಿವ್ ಅಭಿಪ್ರಾಯ ಪಟ್ಟಿದೆ.
ಈ ಪ್ರಸ್ತಾಪಿತ ವಿದೇಯಕದ ಅಂಶಗಳು ಸುಪ್ರೀಂ ಕೋರ್ಟ್ ನಿರ್ದೇಶನದಲ್ಲಿ ರಚಿಸಲ್ಪಟ್ಟ ನ್ಯಾ. ರವೀಂದ್ರನ್ ಸಮಿತಿಯ ಸಲಹೆಗಳ ವಿರುದ್ಧ ಕೂಡ ಇವೆ ಎಂದೂ ವಿಜ್ಞಾನಿಗಳ ಒಕ್ಕೂಟ ಅಭಿಪ್ರಾಯ ಪಟ್ಟಿದೆ.