1 ರಿಂದ 5ನೇ ತರಗತಿ ಶಾಲೆಗಳು ಆರಂಭ: ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ

Prasthutha|


ಶಿವಮೊಗ್ಗ: ಒಂದರಿಂದ 5ನೇ ತರಗತಿ ಶಾಲೆಗಳ ಆರಂಭಕ್ಕೆ ಮಕ್ಕಳು ಮತ್ತು ಪಾಲಕರು ಹಾಗೂ ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

- Advertisement -


ಸೋಮವಾರದಿಂದ (ಅ.25) 1ರಿಂದ 5ನೇ ತರಗತಿ ಶಾಲೆಗಳು ಆರಂಭ ಹಿನ್ನೆಲೆಯಲ್ಲಿ ಶಿವಮೊಗ್ಗದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಸುದ್ದಿಗಾರರ ಜೊತೆ ಸಚಿವರು ಮಾತನಾಡಿದರು.‘ಶಾಲೆಗಳ ಆರಂಭದ ಮೊದಲ ದಿನ ಮಕ್ಕಳು ಮತ್ತು ಶಿಕ್ಷಕರು ಅತ್ಯಂತ ಉತ್ಸಾಹದಿಂದ ಶಾಲೆಗೆ ಬಂದಿದ್ದಾರೆ. ಮೊದಲ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗಿದೆ. ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಹಲವು ಶಾಲೆಗಳಿಗೆ ಜನಪ್ರತಿನಿಧಿಗಳು ತೆರಳಿ ಹೂವು, ಚಾಕೋಲೇಟ್, ಸಿಹಿ ತಿನಿಸು ನೀಡಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಶಾಲೆ ಆರಂಭಕ್ಕೆ ಎಲ್ಲರಿಂದಲೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಣಕ್ಕೆ ನಮ್ಮಲ್ಲಿ ಅತಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನುವುದಕ್ಕೆ ಇಂದಿನ ಬೆಳವಣಿಗೆಗಳು ಸಾಕ್ಷಿ’ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.


‘ಹಂತ ಹಂತವಾಗಿ ಪಿಯು ತರಗತಿಗಳು ಮತ್ತು 10ರಿಂದ 6ನೇ ತರಗತಿಗಳನ್ನು ಆರಂಭಿಸಲಾಗಿದೆ. ಅ.25ರಿಂದ 1ರಿಂದ 5ನೇ ತರಗತಿ ಶಾಲೆಗಳನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸುವ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟಾಸ್ಕ್­ಫೋರ್ಸ್ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಸಚಿವರು ನುಡಿದರು.ಪಿಯು ಮತ್ತು ಶಾಲಾ ಪಠ್ಯಕ್ರಮ ಕಡಿತಗೊಳಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚುವರಿ ಪಾಠ ಮಾಡಿಸಿ ಪಠ್ಯಕ್ರಮ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಪಠ್ಯಕ್ರಮ ಕಡಿತಗೊಳಿಸುವುದು ಸೂಕ್ತವಲ್ಲ’ ಎಂದು ಸಚಿವರು ಹೇಳಿದರು.

- Advertisement -


‘ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರ ಜೊತೆ ಎರಡ್ಮೂರು ಬಾರಿ ಮಾತುಕತೆ ಆಗಿದೆ. ಪರೀಕ್ಷೆ ಇಲ್ಲದೇ ಮುಂಬಡ್ತಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಇಲಾಖೆಯ ನಿಯಮಾನುಸಾರ ಪರೀಕ್ಷೆ ನಡೆಸಿ ಮುಂಬಡ್ತಿ ನೀಡಬೇಕಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಪರೀಕ್ಷೆ ಅನಿವಾರ್ಯ. ಇದನ್ನು ಗಣನೆಗೆ ತೆಗೆದುಕೊಂಡು ಶಿಕ್ಷಕರು ಪರೀಕ್ಷೆ ತೆಗೆದುಕೊಂಡು ಮುಂಬಡ್ತಿ ಪಡೆದುಕೊಳ್ಳುತ್ತಾರೆ’ ಎಂಬ ವಿಶ್ವಾಸವಿದೆ ಎಂದು ಸಚಿವರು ನುಡಿದರು.

‘ಶಾಲಾ ಕಟ್ಟಡ, ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕುರಿತು ಸಾಕಷ್ಟು ಚರ್ಚೆಗಳು, ಆಲೋಚನೆಗಳನ್ನು ಮಾಡಲಾಗುತ್ತಿದೆ. ಅದರ ಜೊತೆಗೆ ಶಾಸಕರು ಮತ್ತು ಸಾರ್ವಜನಿಕರು ಕೂಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು’ ಎಂದು ಸಚಿವರು ಹೇಳಿದರು.
ಶಿವಮೊಗ್ಗದ ಗಾಡಿಕೊಪ್ಪ ತಾಂಡ, ಮಲವಗೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೀರಮಟ್ಟಿ ಕಿರಿಯ ಪ್ರಾಥಮಿಕ ಶಾಲೆಗೆ ಸಚಿವರು ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಸಂವಾದ ನಡೆಸಿದರು. ಎಲ್ಲ ಶಾಲೆಗಳಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಚಿವರು ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚನೆ ನೀಡಿದರು.


ಸಂಜೆವರೆಗೆ ಶಾಲೆ ಇರಲಿ ಎಂದ ಮಕ್ಕಳು:

‘ತರಗತಿಗಳು ಮಧ್ಯಾಹ್ನದವರೆಗೆ ಇರಬೇಕಾ ಅಥವಾ ಸಂಜೆವರೆಗೆ ಇರಬೇಕಾ? ಎಂದು ಮಕ್ಕಳನ್ನು ಸಚಿವರು ಕೇಳಿದಾಗ, ‘ಸಂಜೆವರೆಗೆ ತರಗತಿ ನಡೆಸಿ’ ಎಂದು ಮಕ್ಕಳು ಹೇಳಿದರು.
‘ಶಾಲೆಗಳನ್ನು ನವೆಂಬರ್ ಮೊದಲ ವಾರದಿಂದ ಸಂಜೆವರೆಗೆ ನಡೆಸಲಾಗುತ್ತದೆ. ಎಲ್ಲರೂ ಮಾಸ್ಕ್ ಧರಿಸಬೇಕು. ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು’ ಎಂದು ಸಚಿವರು ಹೇಳಿದರು.



Join Whatsapp