ಬೈಕ್ ಗೆ ಸ್ಕೂಲ್ ಬಸ್ ಡಿಕ್ಕಿ: ಬಾಲಕಿ ಸಾವು

Prasthutha|

ಬೆಂಗಳೂರು: ಸ್ಕೂಲ್ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದು ಬಾಲಕಿಯೊಬ್ಬರು ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿರುವ ದಾರುಣ ಘಟನೆ ಇಂದು ಬೆಳಿಗ್ಗೆ ಬನಶಂಕರಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಹಾರೋಹಳ್ಳಿ ಕೀರ್ತನಾ (16) ಮೃತಪಟ್ಟ ಬಾಲಕಿ. ಘಟನೆಯಲ್ಲಿ ಗಾಯಗೊಂಡಿರುವ ಹರ್ಷಿತಾ ಹಾಗೂ ದರ್ಶನ್ ಎಂಬವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಮೂವರು ಒಂದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ನಲ್ಲಿ ಬೆಳಿಗ್ಗೆ 9ರ ವೇಳೆ ಬನಶಂಕರಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಡಿಕ್ಕಿಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕೀರ್ತನಾ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬನಶಂಕರಿ ಸಂಚಾರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಬಸ್ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp