ನಕಲಿ ಜಾತಿ ಪತ್ರದ ವಿರುದ್ಧ ಪರಿಶಿಷ್ಟರಿಂದ ತಹಶೀಲ್ದಾರ್ ಕಚೇರಿಗೆ ಜಾಥಾ

Prasthutha|

ಮಂಗಳೂರು: ನಕಲಿ ಜಾತಿ ಪತ್ರ ನೀಡುವುದಕ್ಕೆ ಕೂಡಲೇ ತಡೆ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘ, ದ.ಕ. ಜಿಲ್ಲೆಯ ಮೊಗೇರ ಸಂಘ, ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ, ಜಿಲ್ಲೆಯ ಎಲ್ಲ ತಾಲೂಕುಗಳ ಮೊಗೇರ ಸಂಘ, ಜಿಲ್ಲೆಯ ಎಲ್ಲ ತಾಲೂಕುಗಳ ದೈವಸಾನ ಸಮಿತಿ ಸದಸ್ಯರು ಮಂಗಳವಾರ ಮಂಗಳೂರು ತಹಶಿಲ್ದಾರರ ಕಚೇರಿಗೆ ಜಾಥಾ ನಡೆಸಿದರು.
ದಲಿತರ ಹೆಸರಿನಲ್ಲಿ ಬಲಿತರು ನಕಲಿ ಪರಿಶಿಷ್ಟ ಜಾತಿ ಪಡೆದು ಎಷ್ಟು ಕಾಲ ವಂಚಿಸುತ್ತೀರಿ? ತುಳುನಾಡಿನ ಮೂಲನಿವಾಸಿಗಳ ಮತ್ತು ಅಂಬೇಡ್ಕರ್ ಅವರ ವಾರಸುದಾರರಿಗೆ ಮೀಸಲಾತಿ ವಂಚಿಸುತ್ತಿರುವ ಕಂದಾಯ ಇಲಾಖೆಯಿಂದ ಶಾಸಕರವರೆಗೆ ಎಲ್ಲರಿಗೂ ಶಿಕ್ಷೆಯಾಗಲಿ. ದಲಿತರಿಗೆ ನ್ಯಾಯ ಸಿಗಲಿ ಮೊದಲಾದ ಘೋಷಣೆಗಳು ಮೊಳಗಿದವು.

- Advertisement -

1976ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಚೆಯೂ ಮುಗೇರ, ಮೊಗೇರ ಜಾತಿ ಸರ್ಟಿಫಿಕೇಟ್ ನೀಡತೊಡಗಿದ ಮೇಲೆ ನಿಜವಾದ ಮೊಗೇರರನ್ನು ವಂಚಿಸಿ, ಸ್ಪರ್ಶ ಜಾತಿಯವರು ಮೀಸಲಾತಿ ಕಬಳಿಸಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನಮ್ಮ ಮೊಗೇರರು ಇದ್ದಾರೆ. ಬೇರೆಡೆ ಇಲ್ಲವಾದ್ದರಿಂದ ಅಂತಹ ಜಾತಿ ಸರ್ಟಿಫಿಕೇಟ್ ರದ್ದು ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.  
ಅಶೋಕ ಕೊಂಚಾಡಿ, ಎಂ. ದೇವದಾಸ್, ರಮೇಶ್ ಕೋಟ್ಯಾನ್, ಅಂಗರ ಹಾರಾಡಿ, ವೆಂಕಟೇಶ ವಿಟ್ಲ, ಬಾಬು ಎರ್ನೋಡಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯವಾಗಿ ಮೀನುಗಾರ ಮೊಗೇರ ಜನರು ಮುಗೇರ ದಲಿತ ಜನರ ಹೆಸರಿನಲ್ಲಿ ಮೀಸಲಾತಿ ಪಡೆಯುವುದರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.



Join Whatsapp