ಕ್ರಿಮಿನಲ್ ಹಿನ್ನೆಲೆ ಪ್ರಕಟಣೆ: ಬಿಜೆಪಿ ನಾಯಕ ಬಿ ಎಲ್ ಸಂತೋಷ್ ಅರ್ಜಿ ಕುರಿತು ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Prasthutha|

ನವದೆಹಲಿ: ಬಿಹಾರದಲ್ಲಿ 2021ರಲ್ಲಿ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಗಳ ಕ್ರಿಮಿನಲ್‌ ವಿವರಗಳನ್ನು ಸೂಕ್ತ ರೀತಿಯಲ್ಲಿ ಬಹಿರಂಪಡಿಸಿದ ಕಾರಣಕ್ಕೆ ತಮ್ಮ ಬಿಜೆಪಿ ವಿರುದ್ಧ ನೀಡಲಾದ ನ್ಯಾಯಾಂಗ ನಿಂದನೆ ಆದೇಶ ಮರುಪರಿಶೀಲಿಸುವಂತೆ ಕೋರಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಭಾರತ ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದೆ.

- Advertisement -


ಆಯೋಗವನ್ನು ಪ್ರಕರಣದಲ್ಲಿ ಪಕ್ಷಕಾರನಾಗುವಂತೆ ಸೂಚಿಸಿರುವ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಈ ಸಂಬಂಧ ತನ್ನ ಪ್ರತಿಕ್ರಿಯೆ ನೀಡುವಂತೆ ಕೇಳಿತು.
ಕ್ರಿಮಿನಲ್ ಹಿನ್ನೆಲೆಯುಳ್ಳ ಚುನಾವಣಾ ಅಭ್ಯರ್ಥಿಗಳ ವಿವರಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸಲು ವಿಫಲವಾದುದಕ್ಕಾಗಿ ಬಿಜೆಪಿ ಮತ್ತಿತರ ಏಳು ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆಗಸ್ಟ್ 2021ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿ ಬಿ ಎಲ್‌ ಸಂತೋಷ್‌ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನೋಟಿಸ್‌ ಜಾರಿ ಮಾಡಿತು.


ಬಿಹಾರ ಚುನಾವಣೆ ವೇಳೆ ಅಭ್ಯರ್ಥಿಗಳ ಅಪರಾಧದ ಸ್ವರೂಪ, ಆರೋಪ ನಿಗದಿ, ಯಾಕೆ ಈ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಲಾಗಿದೆ ಎಂಬ ವಿವರಗಳನ್ನು ರಾಜಕೀಯ ಪಕ್ಷಗಳ ಅಧಿಕೃತ ಜಾಲತಾಣ, ಪತ್ರಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕೆಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಆದೇಶಿಸಿತ್ತು.

- Advertisement -


ಆದರೆ ಕಡಿಮೆ ಪ್ರಸಾರದ ಪತ್ರಿಕೆಗಳಲ್ಲಿ ಮಾತ್ರ ಬಿಜೆಪಿ ತನ್ನ ಅಭ್ಯರ್ಥಿಗಳ ಕ್ರಿಮಿನಲ್‌ ಪೂರ್ವಾಪರ ಪ್ರಕಟಿಸಿರುವುದನ್ನು ಗಮನಿಸಿದ್ದ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ (ಈಗ ನಿವೃತ್ತ) ಹಾಗೂ ಬಿ ಆರ್ ಗವಾಯಿ ಅವರಿದ್ದ ಪೀಠ 1 ಲಕ್ಷ ಮೊತ್ತದ ದಂಡ ವಿಧಿಸಿತ್ತು. ಅಲ್ಲದೆ ಇಂತಹ ವಿವರಗಳನ್ನು ಪ್ರಕಟಿಸಬೇಕಿದ್ದ ಅರ್ಜಿಗಳನ್ನು ಯಾಂತ್ರಿಕವಾಗಿ ಭರ್ತಿ ಮಾಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿತ್ತು.


ತನ್ನ ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಸಂಬಂಧಿಸಿದಂತೆ ಫಾರ್ಮ್ ಸಿ-7 ಸಲ್ಲಿಸಲು ವಿಫಲವಾದುದಕ್ಕೆ ಪಕ್ಷ ನೀಡಿದ ಕಾರಣ ಸ್ವೀಕಾರಾರ್ಹವಲ್ಲ ಮತ್ತು ತನ್ನ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ನಮಗೆ ಸಮ್ಮತವಾದ ಕಾರಣಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಆ ಸಮಯದಲ್ಲಿ ತೀರ್ಪು ನೀಡಿತ್ತು. ನ್ಯಾಯಾಂಗ ನಿಂದನೆ ಕಾರಣಕ್ಕೆ ಬಿಜೆಪಿ ತಪ್ಪೆಸಗಿದೆ ಎಂದು ಅದು ಪರಿಗಣಿಸಿತ್ತು.
ಶುಕ್ರವಾರ, ಬಿ ಎಲ್‌ ಸಂತೋಷ್‌ ಪರ ವಕೀಲರು ವಾದ ಮಂಡಿಸಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾರಣಗಳನ್ನು ನೀಡಬೇಕಿಲ್ಲ ಎಂದು ನಂತರದ ಆದೇಶಗಳು ಹೇಳಿವೆ. ವಿವರಗಳನ್ನು ಮತದಾರರ ಗಮನಕ್ಕೆ ತಂದರೆ, ಅವರು ಹೇಗೆ ಮತ ಚಲಾಯಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತಾರೆ ಎಂದು ವಾದಿಸಿದರು.


ಅಭ್ಯರ್ಥಿಯೊಬ್ಬರಿಗೆ ಸಿ-7 ನಮೂನೆ ಸಲ್ಲಿಸದಿರುವುದು ಉದ್ದೇಶಪೂರ್ವಕ ಅಲ್ಲ. ತಮ್ಮ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿರುವ 77 ಅಭ್ಯರ್ಥಿಗಳ ಪೈಕಿ 76 ಅಭ್ಯರ್ಥಿಗಳ ಮಾಹಿತಿಯನ್ನು ಅಜಾಗರೂಕತೆಯಿಂದ ತುಂಬಲಾಗಿದೆ. ಹಾಗಾಗಿ ಮಾಹಿತಿ ಬಹಿರಂಗಪಡಿಸುವ ವಿಷಯದಲ್ಲಿ ನ್ಯಾಯಾಲಯದ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲ್ಲ. ಇದಲ್ಲದೆ ಅಭ್ಯರ್ಥಿಗಳ ಆಯ್ಕೆಯ ಕಾರಣಗಳನ್ನು ಹೇಗೆ ನಮೂಸಿಸಬೇಕು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಮತ್ತು ನೇರ ಮಾನದಂಡವಿಲ್ಲ ಎಂದು ವಕೀಲ ಶೈಲೇಶ್‌ ಮಡಿಯಾಳ್‌ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಿವರಿಸಲಾಗಿದೆ.
(ಕೃಪೆ: ಬಾರ್&ಬೆಂಚ್)



Join Whatsapp