ರಾಜಸ್ಥಾನ ಹೈಕೋರ್ಟ್ ಆವರಣದಲ್ಲಿನ ಮನು ಪುತ್ಥಳಿ ತೆರವು ಕೋರಿದ್ದ ಪಿಐಎಲ್ ವಿಚಾರಣೆ ನಡೆಸಲು ಸುಪ್ರೀಂ ನಕಾರ

Prasthutha|

ನವದೆಹಲಿ: ರಾಜಸ್ಥಾನ ಹೈಕೋರ್ಟ್ನ ಜೈಪುರ ಪೀಠದ ಆವರಣದಲ್ಲಿ ನಿರ್ಮಿಸಲಾಗಿರುವ ಶ್ರೇಣೀಕೃತ ವ್ಯವಸ್ಥೆಯ ಪ್ರತಿಪಾದಕ ಮನುವಿನ ಪುತ್ಥಳಿಯನ್ನು ತೆರವು ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ.

- Advertisement -


ಪ್ರಕರಣವು ರಾಜಸ್ಥಾನ ಹೈಕೋರ್ಟ್ನಲ್ಲಿ ಬಾಕಿ ಇರುವುದರಿಂದ ಮತ್ತೆ ಇಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.


“ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವಾಗ ಸುಪ್ರೀಂ ಕೋರ್ಟ್ ಏಕೆ ಮನವಿ ವಿಚಾರಣೆ ನಡೆಸಬೇಕು? ನೀವು ಹೈಕೋರ್ಟ್ ಸಂಪರ್ಕಿಸಿ” ಎಂದು ನ್ಯಾ. ಖನ್ನಾ ಹೇಳಿದರು.
ಶ್ರೇಣೀಕೃತ ವ್ಯವಸ್ಥೆಯಲ್ಲಿ ಜಾತಿ ಪದ್ಧತಿಯನ್ನು ಪ್ರತಿಪಾದಿಸಿದ, ಅಷ್ಟೇನು ಜನಪ್ರಿಯನಲ್ಲದ ಮನುವಿನ ಪುತ್ಥಳಿಯನ್ನು 1989ರಲ್ಲಿ ನ್ಯಾಯಾಲಯದ ಆವರಣದಲ್ಲಿ ಗುಟ್ಟಾಗಿ ಸ್ಥಾಪಿಸಲಾಗಿದೆ. ಅದೇ ವರ್ಷ ಪೂರ್ಣ ನ್ಯಾಯಾಲಯವು ಸಭೆ ನಡೆಸಿ, ಪುತ್ಥಳಿ ತೆರವಿನ ನಿರ್ಧಾರ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿಯು ಪೂರ್ಣ ಪೀಠದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ವಿಚಾರಗಳಿಗೆ ಮನು ರಚಿಸಿರುವ ಮನುಸ್ಮೃತಿ ವಿರುದ್ಧವಾಗಿದೆ. ಮಹಿಳೆಯರೂ ಸೇರಿದಂತೆ ದೇಶದ ಶೇ. 75ರಷ್ಟು ಮಂದಿಗೆ ಮನುಸ್ಮೃತಿ ವಿರುದ್ಧವಾಗಿದೆ. ಮನುವಿನ ಈ ಪುತ್ಥಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಚ್ಯುತಿ ಉಂಟು ಮಾಡಿದ್ದು, ತಾರತಮ್ಯ ಪ್ರತಿಪಾದಿಸುವ ರಾಷ್ಟ್ರದಲ್ಲಿ ಬೇರೆ ದೇಶಗಳು ಹೂಡಿಕೆ ಮಾಡಲು ಬಯಸುವುದಿಲ್ಲ. ಹೀಗಾಗಿ, ಮನುವಿನ ಪುತ್ಥಳಿ ತೆರವು ಮಾಡುವುದರಿಂದ ಹಿಂದೂ ಸಮಾಜಕ್ಕೆ ಒಳಿತಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
(ಕೃಪೆ: ಬಾರ್ & ಬೆಂಚ್)



Join Whatsapp