ಹೊಸದಿಲ್ಲಿ: ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಆಲ್ಟ್ ನ್ಯೂಸ್ ಸಹ ಸಂಪಾದಕ ಮುಹಮ್ಮದ್ ಝುಬೈರ್ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್ ಮುಂದಿನ ಆದೇಶದವರೆಗೆ ವಿಸ್ತರಿಸಿದೆ.
ಹಿಂದೂ ಧಾರ್ಮಿಕ ಮುಖಂಡರನ್ನು ದ್ವೇಷ ಬಿತ್ತುವವರು ಎಂದು ಉಲ್ಲೇಖಿಸಿದ್ದರ ಸಂಬಂಧ ಉತ್ತರ ಪ್ರದೇಶದ ಸೀತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಂಧನಕ್ಕೊಳಗಾಗಿರುವ ಝುಬೈರ್ ಅವರು ತಮ್ಮ ವಿರುದ್ಧದ ಪ್ರಕರಣ ಪ್ರಶ್ನಿಸಿ ಹಾಗೂ ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಉತ್ತರ ಪ್ರದೇಶದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ಅವರು ಪ್ರತಿ ಅಫಿದವಿಟ್ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ಪೀಠವು ನಾಲ್ಕು ವಾರಗಳ ಕಾಲಾವಕಾಶವನ್ನು ನೀಡಿತು.
ಕೆಲವು ಹಿಂದುತ್ವ ಸ್ವಾಮೀಜಿಗಳನ್ನು ದ್ವೇಷ ಸಾಧಕರು ಎಂದು ಕರೆದುದರ ಮೊಕದ್ದಮೆಯಲ್ಲಿ ಬಂಧನದಲ್ಲಿರುವ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ರಿಗೆ ನೀಡಿದ್ದ ಸೀತಾಪುರದ ಪ್ರಕರಣದಲ್ಲಿ ನೀಡಿದ್ದ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟು ಇಂದು ವಿಸ್ತರಿಸಿತು.
ಜಸ್ಟಿಸ್ ಗಳಾದ ಡಿ. ವೈ. ಚಂದ್ರಚೂಡ್, ಎ. ಎಸ್. ಬೋಪಣ್ಣ ಅವರುಗಳಿದ್ದ ಪೀಠಕ್ಕೆ ಉತ್ತರ ಪ್ರದೇಶದ ಸರಕಾರದ ಪರ ಹಾಜರಾದ ರಾಜು ಅವರು ಪ್ರತಿ ಅಫಿದವಿತ್ ಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಸೀತಾಪುರ ಪ್ರಕರಣಕ್ಕೆ ಮಾತ್ರ ಸಂಬಂಧಿಸಿದಂತೆ ಜು. 8ರಂದು ಜುಬೈರ್ ರಿಗೆ ಕೋರ್ಟ್ 5 ದಿನಗಳ ಜಾಮೀನು ನೀಡಿತ್ತು. ಅದನ್ನು ಇಂದು ವಿಸ್ತರಿಸಿತು.
ಉತ್ತರ ಪ್ರದೇಶಕ್ಕೆ ಪ್ರತಿ ಅಫಿದವಿತ್ ಸಲ್ಲಿಸಲು ನಾಲ್ಕು ವಾರ ನೀಡಲಾಗಿದೆ. ಝುಬೈರ್ ರಿಗೆ ನೀಡಿದ ಮಧ್ಯಂತರ ಜಾಮೀನು ಇಂದಿಗೇ ಮುಗಿಯುತ್ತದೆ ಎಂದು ಝುಬೈರ್ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೋನ್ಸಾಲ್ವೆಸ್ ಹೇಳಿದರು. ಮತ್ತೊಮ್ಮೆ ಈ ಪ್ರಕರಣವನ್ನು ಸೆಪ್ಟೆಂಬರ್ 7ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಹೇಳಿದ ನ್ಯಾಯಾಲಯವು ಝುಬೈರ್ ರ ಮಧ್ಯಂತರ ಜಾಮೀನು ಅವಧಿಯನ್ನು ಸಹ ವಿಸ್ತರಿಸಿತು.
ಝುಬೈರ್ ಹಲವು ಪ್ರಕರಣ ಎದುರಿಸುತ್ತಿದ್ದು, ಈ ಜಾಮೀನು ಸೀತಾಪುರ ಪ್ರಕರಣಕ್ಕೆ ಮಾತ್ರ ಸಂಬಂಧಿಸಿದೆ ಎಂದೂ ಕೋರ್ಟ್ ಹೇಳಿತು.