ಒಂದೇ ವಾರದಲ್ಲಿ 2,000 ರೂ. ನೋಟುಗಳ 14,000 ಕೋಟಿ ಡೆಪಾಸಿಟ್: SBI

Prasthutha|

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೇ 19 ರಂದು 2,000 ರೂ. ಮುಖಬೆಲೆಯ ನೋಟುಗಳನ್ನು (Rs. 2000 Note) ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಇದುವರೆಗೆ ಅಂದಾಜು 17,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿ ಹಾಗೂ ವಿನಿಮಯ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

- Advertisement -

ಆರ್‌ಬಿಐ ಮೇ 19 ರಂದು ಚಲಾವಣೆಯಲ್ಲಿದ್ದ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿತು. ಸಾರ್ವಜನಿಕರು 2,000 ರೂ.ಯ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿ ಇಡಲು ಹಾಗೂ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಮೇ 23 ರಿಂದ ಅನುಮತಿ ನೀಡಿದ್ದು, ಸೆಪ್ಟೆಂಬರ್ 30ರ ವರೆಗೆ ಕಾಲಾವಕಾಶ ನೀಡಿದೆ.

ನೋಟುಗಳನ್ನು ಬದಲಿಸಿಕೊಳ್ಳಲು ಅನುಮತಿ ನೀಡಿದ ವಾರದ ಬಳಿಕ ಮಂಗಳವಾರ ಮಾಹಿತಿ ನೀಡಿರುವ ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ, ತಮ್ಮ ಬ್ಯಾಂಕ್‌ನಲ್ಲಿ ಇಲ್ಲಿಯವರೆಗೆ ಸುಮಾರು 14,000 ಕೋಟಿ ರೂ. ಮೌಲ್ಯದ 2,000 ರೂ.ಯ ನೋಟುಗಳನ್ನು ಠೇವಣಿಯಾಗಿ ಸ್ವೀಕರಿಸಲಾಗಿದೆ. ಸುಮಾರು 3,000 ಕೋಟಿ ರೂ. ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಲಾಗಿದೆ. ಇದು ಮಾರುಕಟ್ಟೆಯಲ್ಲಿರುವ ಸುಮಾರು 20% ದಷ್ಟು ನೋಟುಗಳು ಈಗ ನಮ್ಮಲ್ಲಿದೆ ಎಂದು ತಿಳಿಸಿದ್ದಾರೆ.

- Advertisement -

ನೋಟು ಬದಲಾವಣೆ ಹಾಗೂ ಠೇವಣಿ ಇಡುವ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, 2,000 ರೂ. ನೋಟುಗಳನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಯಾವುದೇ ರೀತಿಯ ಆತಂಕ ಬೇಡ. ಈ ನೋಟುಗಳು ಕಾನೂನಾತ್ಮಕವಾಗಿ ಮುಂದುವರಿಯಲಿದೆ. ನಾವು ಒಟ್ಟು ಎಷ್ಟು ನೋಟುಗಳು ವಾಪಸಾಗುತ್ತವೆ ಎಂಬುದನ್ನು ಕಾದು ನೋಡಲಿದ್ದೇವೆ. ಸೆಪ್ಟೆಂಬರ್ 30ರ ವರೆಗೆ ಏನಾಗುತ್ತದೆ ಎಂಬುದನ್ನು ಈಗಲೇ ಊಹೆ ಮಾಡಲು ಸಾಧ್ಯವಿಲ್ಲ ಎಂದು ದಾಸ್ ತಿಳಿಸಿದ್ದಾರೆ.

ಆರ್‌ಬಿಐ ನೋಟು ಬದಲಾವಣೆಗೆ ಸೆಪ್ಟೆಂಬರ್ 30ರ ವರೆಗೆ ಸಮಯಾವಕಾಶ ನೀಡಿದ್ದು, ಒಂದು ಬಾರಿ 2,000 ರೂ. 10 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ನೋಟುಗಳನ್ನು ಡೆಪಾಸಿಟ್ ಮಾಡಲು ಯಾವುದೇ ನಿರ್ಬಂಧವಿಲ್ಲ. ಒಂದು ಬಾರಿಗೆ ಡೆಪಾಸಿಟ್ ಮಾಡಬಹುದಾದ ಗರಿಷ್ಠ ಮಿತಿಯನ್ನು ಆರ್‌ಬಿಐ ನಿಗದಿಪಡಿಸಿಲ್ಲ.

ಒಂದು ಖಾತೆಗೆ 50,000 ರೂ.ಗಿಂತಲೂ ಕಡಿಮೆ ಮೊತ್ತದ ಹಣವನ್ನು ಡೆಪಾಸಿಟ್ ಮಾಡಲು ಯಾವುದೇ ದಾಖಲೆಗಳ ಅಗತ್ಯವಿಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಹಣವನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮದ ಅನ್ವಯ ಮಾಡಲಾಗುತ್ತದೆ ಎಂಬುದು ತಿಳಿದಿರಬೇಕು. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವಾಗ ಪ್ಯಾನ್ ಕಾರ್ಡ್ ಸಲ್ಲಿಸಬೇಕಾಗುತ್ತದೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ



Join Whatsapp