ನವದೆಹಲಿ: ಸೆಯ್ಯದ್ ಮುಷ್ತಾಕ್ ಅಲಿ T-20 ಟೂರ್ನಿಯ ರೋಚಕ ಫೈನಲ್ ಹಣಾಹಣಿಯಲ್ಲಿ 4 ವಿಕೆಟ್’ಗಳ ಅಂತರದಲ್ಲಿ ಗೆದ್ದ ತಮಿಳುನಾಡು ತಂಡ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ತಮಿಳುನಾಡು ತಂಡದ ಪಾಲಿಗೆ ‘ಹೀರೋ’ ಆದ ಶಾರುಕ್ ಖಾನ್, ಅಂತಿಮ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ಕರ್ನಾಟಕದ ಕನಸನ್ನು ನುಚ್ಚುನೂರು ಮಾಡಿದರು.
ಟಾಸ್ ಸೋತು ಬ್ಯಾಟಿಂಗ್’ಗೆ ಇಳಿಸಲ್ಪಟ್ಟ ಕರ್ನಾಟಕ 7 ವಿಕೆಟ್ ನಷ್ಟದಲ್ಲಿ 151 ರನ್’ಗಳಿಸಿತ್ತು. ಗುರಿ ಬೆನ್ನತ್ತಿದ್ದ ತಮಿಳುನಾಡು ತಂಡಕ್ಕೆ ಕೊನೆಯ ಎಸೆತದಲ್ಲಿ ಗೆಲುವಿಗೆ 5 ರನ್’ಗಳ ಅಗತ್ಯವಿತ್ತು. ಪ್ರತೀಕ್ ಜೈನ್ ಎಸೆತವನ್ನು ಭರ್ಜರಿ ಸಿಕ್ಸರ್’ಗೆ ಅಟ್ಟಿದ ಶಾರೂಕ್ ಖಾನ್, ತಮಿಳುನಾಡು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.
ಶಾರೂಕ್ ಖಾನ್ ಅಬ್ಬರದ ಆಟದ ಮುಂದೆ ಕರ್ನಾಟಕ ಬೌಲರ್’ಗಳು ನಿರುತ್ತರರಾದರು. 15 ಎಸೆತಗಳಲ್ಲಿ 3 ಸಿಕ್ಸರ್ , 1 ಬೌಂಡರಿ ನೆರವಿನಿಂದ 33 ರನ್ ಸಿಡಿಸಿದ ಖಾನ್, ಕರ್ನಾಟಕದ ಕೈಯಲ್ಲಿದ್ದ ಗೆಲುವನ್ನು ಕಸಿದರು. ಅಂತಿಮ ಓವರ್ನಲ್ಲಿ ತಮಿಳುನಾಡು ಗೆಲುವಿಗೆ 16 ರನ್ ಅಗತ್ಯವಿತ್ತು. ಪ್ರತೀಕ್ ಜೈನ್ ಓವರ್’ನ ಮೊದಲ ಎಸೆತದಲ್ಲಿ ಸಾಯಿ ಕಿಶೋರ್ ಬೌಂಡರಿ ಬಾರಿಸಿದರೆ, ಕೊನೆಯ ಎಸೆತದಲ್ಲಿ 5 ರನ್ಗಳ ಒತ್ತಡವನ್ನ ಮೆಟ್ಟಿ ನಿಂತು ಶಾರೂಕ್ ಸಿಕ್ಸರ್ ಸಿಡಿಸಿದರು. ಆ ಮೂಲಕ ತಮಿಳುನಾಡು ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ಮುಡಿಗೇರಿಸಿಕೊಂಡಿದೆ. ಅರ್ಹವಾಗಿಯೇ ಶಾರೂಖ್ ಖಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ್ರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಕರ್ನಾಟಕ, ಅಭಿನವ್ ಮನೋಹರ್ (46) ಹಾಗೂ ಪ್ರವೀಣ್ ದುಬೆ (33) ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟದಲ್ಲಿ 151 ರನ್’ಗಳಿಸಿತ್ತು. ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್’ನಲ್ಲಿದ್ದ ನಾಯಕ ಮನೀಷ್ ಪಾಂಡೆ ಫೈನಲ್ ಪಂದ್ಯದಲ್ಲಿ ಕೇವಲ 13 ರನ್’ಗಳಿಸಿ ನಿರ್ಗಮಿಸಿದ್ದು ಕರ್ನಾಟಕಕ್ಕೆ ಹಿನ್ನಡೆಯಾಯಿತು. ಕರುಣ್ ನಾಯರ್ ಹಾಗು ಜಗದೀಶ್ ಸುಚಿತ್ ತಲಾ 18 ರನ್’ಗಳಿಸಿದರು. ತಮಿಳುನಾಡು ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಸಾಯಿ ಕಿಶೋರ್ 4 ಓವರ್’ಗಳಲ್ಲಿ ಕೇವಲ 12 ರನ್ ನೀಡಿ ಮೂರು ಪ್ರಮುಖ ವಿಕೆಟ್ ಪಡೆದು ಮಿಂಚಿದರು.