ಭಗತ್ ಸಿಂಗ್ ಮತ್ತು ನೇತಾಜಿಯವರ ಭಾರತದ ಕನಸನ್ನು ವಿರೋಧಿಸಿದ್ದ ಸಾವರ್ಕರ್

Prasthutha|

ವಿನಾಯಕ ದಾಮೋದರ್ ಸಾವರ್ಕರ್ ಭಾರತದ ಇತಿಹಾಸದಲ್ಲಿ ಒಂದು ಅಚ್ಚಳಿಯದ ವಿವಾದಾತ್ಮಕ ಹೆಸರು. ಸಾವರ್ಕರ್ ಅವರು ಗಾಂಧೀಜಿ ನೇತೃತ್ವದ ಇಡೀ ಸ್ವಾತಂತ್ರ್ಯ ಚಳುವಳಿಯನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಮತ್ತು ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಪ್ರಕ್ಷುಬ್ಧ ವ್ಯಕ್ತಿತ್ವದ ಮನುಷ್ಯ ಎನ್ನುವ ಸಂಗತಿಯು ಇತ್ತೀಚಿಗೆ ಬಿಜೆಪಿ ಆಡಳಿತ ಸಾವರ್ಕರ್ ಅವರನ್ನು ಅತಿಯಾಗಿ ಹಾಗೂ ಸುಳ್ಳಾಗಿ ವಿಜೃಂಭಿಸಲು ಆರಂಭಿಸಿದ ಮೇಲೆ ಹೆಚ್ಚುಹೆಚ್ಚಾಗಿ ಜನರಿಗೆ ಸತ್ಯ ತಿಳಿಯುತ್ತಿದೆ. ಸಾವರ್ಕರ್ ಅವರು ಕಾಲಕಾಲಕ್ಕೆ ತೆಗೆದುಕೊಂಡ ವಿವಾದಾತ್ಮಕ ನಿರ್ಧಾರಗಳು ಹೇಗೆ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ದಿಕ್ಕು ತಪ್ಪಿಸಿದ್ದವು ಎನ್ನುವ ಬಗ್ಗೆ ಇತ್ತೀಚಿಗೆ ಅನೇಕ ಜನರು ತಮ್ಮ ಅಂಕಣ ಬರಹಗಳ ಮೂಲಕ ಬೆಳಕು ಚೆಲ್ಲುತ್ತಿದ್ದಾರೆ. ಅವುಗಳ ಕುರಿತು ನಾನು ಈ ಹಿಂದೆ ಒಂದೆರಡು ಲೇಖನಗಳನ್ನು ಬರೆದಿದ್ದೇನೆ. ಕೌಂಟರ್‌ ವ್ಯೂ ಎನ್ನುವ ಹೆಸರಿನ ವೆಬ್ ಜರ್ನಲ್‌ ನಲ್ಲಿ ಶಂಸುಲ್ ಇಸ್ಲಾಮ್ ಅವರು ಬರೆದ ಅಂಕಣವೊಂದನ್ನು ಆಧಾರವಾಗಿಟ್ಟುಕೊಂಡು ನಾನು ಭಗತ್ ಸಿಂಗ್ ಮತ್ತು ನೇತಾಜಿ ಸುಭಾಶ್ಚಂದ್ರ ಭೋಸ್ ಈ ಇಬ್ಬರು ದಿಗ್ಗಜ ದೇಶಪ್ರೇಮಿಗಳು ಭಾರತದ ಕುರಿತ ಹೊಂದಿದ್ದ ಕನಸನ್ನು ಸಾವರ್ಕರ್ ಹೇಗೆ ವಿರೋಧಿಸಿದರು ಎನ್ನುವುದನ್ನು ಇಲ್ಲಿ ಚರ್ಚಿಸಿದ್ದೇನೆ.

- Advertisement -

ಆಗಸ್ಟ್ 20, 2019ರಂದು ತಡರಾತ್ರಿಯ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಆರ್‌ ಎಸ್‌ ಎಸ್‌ ನ ವಿದ್ಯಾರ್ಥಿ ವಿಭಾಗವು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳ ಜೊತೆಗೆ ಒಂದೇ ಪೀಠದ ಮೇಲೆ ಸಾವರ್ಕರ್ ಅವರ ಪ್ರತಿಮೆ ಸ್ಥಾಪಿಸಿದ ವಿಕೃತ ಘಟನೆ ನಡೆದುಹೋಗಿದೆ. ತಮ್ಮ ಇಡೀ ಬದುಕನ್ನು ಸಮಾಜವಾದಿ ಚಿಂತನೆಗಳಿಗೆ ಮೀಸಲಿಟ್ಟು ಜೀವತೆತ್ತವರು ಭಗತ್‌ ಸಿಂಗ್. ಪ್ರಜಾಸತ್ತಾತ್ಮಕ-ಜಾತ್ಯತೀತ ಗಣರಾಜ್ಯಕ್ಕಾಗಿ ಭಾರತದ ಎಲ್ಲ ಪ್ರದೇಶಗಳ ಹಾಗು ಎಲ್ಲ ಜಾತಿ-ಧರ್ಮಗಳ ಜನರನ್ನು ಒಂದುಗೂಡಿಸಿ ಸಶಸ್ತ್ರ ಆಜಾದ್ ಹಿಂದ್ ಫೌಜ್ (INA=ಇಂಡಿಯನ್ ನ್ಯಾಷನಲ್ ಆರ್ಮಿ) ಅನ್ನು ಹುಟ್ಟುಹಾಕಿ ಬ್ರಿಟಿಷರ ದಮನಕಾರಿ ಆಡಳಿತ ಹಾಗೂ ಕೆಲವು ಧಾರ್ಮಿಕ ಮೂಲಭೂತವಾದಿಗಳ ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧ ಹೋರಾಡಿದವರು ನೇತಾಜಿಯವರು. ಆದರೆ ವಾಸ್ತವದಲ್ಲಿ ಸಾವರ್ಕರ್ ಅವರು ಭಾರತೀಯರೆಲ್ಲರನ್ನು ಒಳಗೊಂಡ ಸ್ವಾತಂತ್ರ್ಯ ಚಳುವಳಿಯನ್ನು ವಿಫಲಗೊಳಿಸಲು ಬ್ರಿಟಿಷರ ಹಾಗೂ ಮುಸ್ಲಿಮ್ ಲೀಗ್‌ ನ ಪರವಾಗಿ ನಿಂತಿದ್ದರು ಎಂಬುದಕ್ಕೆ ಸಮಕಾಲೀನ ದಾಖಲೆಗಳು ಸಾಕ್ಷಿಯಾಗಿ ನಿಂತಿವೆ. ಮತ್ತೊಂದು ಕಡೆ ಭಗತ್ ಸಿಂಗ್ ಮತ್ತು ನೇತಾಜಿಯವರು ಎಂದಿಗೂ ವಸಾಹತುಶಾಹಿ ಆಡಳಿತವನ್ನು ಬೆಂಬಲಿಸಲಿಲ್ಲ, ಯಾವತ್ತೂ ತಾವು ತಳೆದ ನಿರ್ಧಾರದ ಕುರಿತು ಪಶ್ಚಾತ್ತಾಪ ಪಡಲಿಲ್ಲ ಮತ್ತು ಕ್ಷಮೆ ಕೇಳಲಿಲ್ಲ. ಅದೇ ತಮ್ಮನ್ನು ತಾವು ‘ವೀರ್’ ಎಂದು ಕರೆದುಕೊಂಡ ಹಿಂದುತ್ವದ ಪ್ರತಿಪಾದಕ ಸಾವರ್ಕರ್ ಅವರು 1911, 1913, 1914, 1918 ಮತ್ತು 1920 ರಲ್ಲಿ ಐದು ಬಾರಿ ಬರೆದ ಕ್ಷಮಾದಾನ ಅರ್ಜಿಗಳು ಅವರ ಭಾರತದ ಸ್ವರಾಜ್ಯದ ಬಗೆಗಿನ ನಿಯತ್ತನ್ನು ಬಟಾಬಯಲುಗೊಳಿಸಿವೆ ಎಂಬುದು ಶಂಸುಲ್ ಇಸ್ಲಾಮ್ ಅವರ ಖಚಿತ ಅಭಿಪ್ರಾಯವಾಗಿದೆ.

ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರ ಆಧರಿಸುವ ಈ ಸ್ವಯಂಘೋಷಿತ ‘ವೀರ್’ 1910-11ರಲ್ಲಿ ಬ್ರಿಟಿಷ್ ಆಡಳಿತದ ನ್ಯಾಯ ವ್ಯವಸ್ಥೆಯಿಂದ 50 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿ 10 ವರ್ಷಗಳಿಗಿಂತ ಕಡಿಮೆ ಕಾಲ ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿದ್ದರು. ಅಂತಿಮವಾಗಿ 5 ಬಾರಿ ಕ್ಷಮಾಪಣಾ ಅರ್ಜಿ ಬರೆದು, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು 1924ರಲ್ಲಿ ಮಹಾರಾಷ್ಟ್ರದ ಯರವಾಡ ಜೈಲಿನಿಂದ ಬಿಡುಗಡೆಯಾದರು. ಸಾವರ್ಕರ್ ಜೊತೆಯಲ್ಲಿ ಸೆಲ್ಯುಲರ್ ಜೈಲಿನಲ್ಲಿದ್ದ ಇನ್ನೂ ನೂರಾರು ಜನ ಕ್ರಾಂತಿಕಾರಿಗಳು ತಮ್ಮ ಶಿಕ್ಷೆಯ ಸಂಪೂರ್ಣ ಅವಧಿ ಸೆರೆವಾಸದಲ್ಲಿ ಉಳಿದಿದ್ದರು. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಸುಖದೇವ್, ರಾಜಗುರು ಮತ್ತು ರೋಷನ್ ಸಿಂಗ್ ಅವರಂತಹ ಹುತಾತ್ಮರು ಎಂದಿಗೂ ಬ್ರಿಟಿಷರಲ್ಲಿ ಕ್ಷಮೆ ಕೇಳಲಿಲ್ಲ. ಉಳಿದೆಲ್ಲ ದೇಶಭಕ್ತ ಹೋರಾಟಗಾರರು ತಮ್ಮ ವೈಯಕ್ತಿಕ ಸ್ವಾತಂತ್ರ್ಯದ ಬದಲಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಹೋರಾಟವನ್ನು ತ್ಯಜಿಸಲು ಒಪ್ಪಲಿಲ್ಲ. ಈ ಸಂಗತಿಯು ದಿ ಇಂಡಿಯನ್ ಎಕ್ಸ್‌ ಪ್ರೆಸ್, ಸೆಪ್ಟೆಂಬರ್ 21, 2004 ರಲ್ಲಿ ಪ್ರಕಟವಾದ ಮಾನಿನಿ ಚಟರ್ಜಿಯವರ ‘ದಿ ಕಾಲಾ ಪಾನಿ ಸ್ಟೋರಿ’ ಎನ್ನುವ ಲೇಖನದಲ್ಲಿ ವಿಸ್ತ್ರತವಾಗಿ ವಿವರಿಸಲಾಗಿದೆ ಎನ್ನುತ್ತಾರೆ ಶಂಸುಲ್ ಅವರು. ಎರಡನೇ ಜಾಗತಿಕ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರು ದೇಶದ ವಿಮೋಚನೆಗಾಗಿ ವಿದೇಶಿ ಬೆಂಬಲವನ್ನು ಪಡೆಯಲು ಮತ್ತು ದೇಶದ ಈಶಾನ್ಯ ಭಾಗದಲ್ಲಿ ಮಿಲಿಟರಿ ದಾಳಿಯನ್ನು ಸಂಘಟಿಸಲು ಪ್ರಯತ್ನಿಸಿ ಅಂತಿಮವಾಗಿ ‘ಆಜಾದ್ ಹಿಂದ್ ಫೌಜ್’ (ಭಾರತೀಯ ರಾಷ್ಟ್ರೀಯ ಸೇನೆ) ಎಂಬ ಹೆಸರಿನ ಸಶಸ್ತ್ರ ಪಡೆಯನ್ನು ಸ್ಥಾಪಿಸಿದರು. ಆದರೆ ಅದಕ್ಕೆ ತದ್ವಿರುದ್ದ ಎನ್ನುವಂತೆ ಅದೇ ಸಂದರ್ಭದಲ್ಲಿ ಸಾವರ್ಕರ್ ಅವರು ತನ್ನ ಬ್ರಿಟಿಷ್ ಯಜಮಾನರಿಗೆ ಸಂಪೂರ್ಣ ಮಿಲಿಟರಿ ಸಹಕಾರವನ್ನು ನೀಡಿದರು.

- Advertisement -

1941ರಲ್ಲಿ ಭಾಗಲ್ಪುರದಲ್ಲಿ ನಡೆದ ಹಿಂದೂ ಮಹಾಸಭೆಯ 23ನೇ ಅಧಿವೇಶನವನ್ನು ಉದ್ದೇಶಿಸಿ ಸಾವರ್ಕರ್ ಅವರು ಹೀಗೆ ಹೇಳಿದ್ದರು:

‘‘ಈಗ ನಮ್ಮ ಗಡಿಯನ್ನು ನೇರವಾಗಿ ತಲುಪಿರುವ ಜಾಗತಿಕ ಯುದ್ಧವು ಒಂದೇ ಬಾರಿಗೆ ನಮಗೆ ಅಪಾಯವನ್ನು ಉಂಟು ಮಾಡುತ್ತದೆ. ಈ ಅವಕಾಶವನ್ನು ಬಳಸಿಕೊಂಡು ನಾವು ಮಿಲಿಟರೀಕರಣದ ಚಳುವಳಿಯನ್ನು ತೀವ್ರಗೊಳಿಸಬೇಕು. ಪ್ರತಿ ಪಟ್ಟಣ ಮತ್ತು ಹಳ್ಳಿಗಳಲ್ಲಿನ ಹಿಂದೂ ಮಹಾಸಭೆಯ ಪ್ರತಿಯೊಂದು ಶಾಖೆಯು ಹಿಂದೂಗಳನ್ನು ಹುರಿದುಂಬಿಸಿ ಸಕ್ರಿಯವಾಗಿ ಬ್ರಿಟಿಷ್ ಸೈನ್ಯಕ್ಕೆ ಸೇರುವಂತೆ ನೋಡಿಕೊಳ್ಳಬೇಕು. ಹಿಂದೂಗಳು ಸೈನ್ಯ, ನೌಕಾಪಡೆ, ವೈಮಾನಿಕ ಪಡೆಗಳು ಮತ್ತು ವಿವಿಧ ಯುದ್ಧ-ಕ್ರಾಫ್ಟ್ ತಯಾರಿಕೆಗಳಿಗೆ ಸೇರಿಕೊಳ್ಳಬೇಕು’’ (ಸಾವರ್ಕರ್, ವಿ ಡಿ. ಸಮಗ್ರ ಸಾವರ್ಕರ್ ವಾಂಙ್ಮಯ: ಹಿಂದೂ ರಾಷ್ಟ್ರ ದರ್ಶನ, ಸಂಪುಟ 6, ಮಹಾರಾಷ್ಟ್ರ ಪ್ರಾಂತಿಕ್ ಹಿಂದೂಸಭಾ, ಪೂನಾ, 1963, ಪುಟ 460-61 ಪುಸ್ತಕದಲ್ಲಿ ಉಲ್ಲೇಖವಾಗಿದೆ). ಹೀಗೆ ಸಾವರ್ಕರ್ ಅವರ ಬ್ರಿಟಿಷ್ ಸರಕಾರದ ಪರವಾದ ಅಚಲ ನಿಷ್ಠೆ ಬಹಿರಂಗಗೊಂಡ ಬಗ್ಗೆ ಶಂಸುಲ್ ಅವರು ಪ್ರಸ್ತಾಪಿಸಿದ್ದಾರೆ.

ಸಾವರ್ಕರ್ ಅವರು ಬ್ರಿಟಿಷರಿಗೆ ಎಷ್ಟರ ಮಟ್ಟಿಗೆ ಸಹಾಯ ಮಾಡಲು ಸಿದ್ಧರಿದ್ದರು ಎಂಬುದನ್ನು ಅವರ ಈ ಕೆಳಗಿನ ಮಾತುಗಳಿಂದ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು: ಭಾರತದ ರಕ್ಷಣೆಗೆ ಸಂಬಂಧಿಸಿದಂತೆ, ಹಿಂದೂ ಧರ್ಮವು ಹಿಂದೂ ಹಿತಾಸಕ್ತಿಗಳಿಗೆ ಅನುಗುಣವಾಗಿರುವ ಭಾರತದಲ್ಲಿನ ಬ್ರಿಟಿಷ್ ಸರಕಾರಕ್ಕೆ ಈ ಯುದ್ಧದ ಸಂದರ್ಭದಲ್ಲಿ ಬೆಂಬಲಿಸಲು ಹಿಂಜರಿಯಬಾರದು. ಸೇನೆ, ನೌಕಾಪಡೆ ಮತ್ತು ವೈಮಾನಿಕ ಪಡೆಗಳಲ್ಲಿ ಸಾಧ್ಯವಾದಷ್ಟು ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಸೇರಿಕೊಳ್ಳಬೇಕು. ಯುದ್ಧಕ್ಕೆ ಜಪಾನ್‌ ನ ಪ್ರವೇಶ ನಮ್ಮನ್ನು ಆತಂಕಕ್ಕೀಡು ಮಾಡಿದೆ. ನಾವು ಇಷ್ಟಪಡಲಿ, ಪಡದಿರಲಿ ಯುದ್ಧದ ಸಂದರ್ಭದಲ್ಲಿ ಹಿಂದೂಗಳ ರಕ್ಷಣೆಗಾಗಿ ಬ್ರಿಟಿಷರನ್ನು ನಾವು ಬೆಂಬಲಿಸಲೇಬೇಕು. ಆದ್ದರಿಂದ ಹಿಂದೂ ಮಹಾಸಭೆ ಹಿಂದೂಗಳನ್ನು ವಿಶೇಷವಾಗಿ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯಗಳಲ್ಲಿ ಒಂದು ನಿಮಿಷವೂ ತಡಮಾಡದೆ ಎಲ್ಲಾ ಶಸ್ತ್ರಾಸ್ತ್ರಗಳ ಮಿಲಿಟರಿ ಪಡೆಗಳನ್ನು ಸೇರಲು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಪ್ರಚೋದಿಸಬೇಕು. ಇದು ‘ವೀರ್’ ಖ್ಯಾತಿಯ ಸಾವರ್ಕರ್ ಅವರ ಬ್ರಿಟಿಷರ ಪರವಾದ ನಿಲುವಿನ ಅನೇಕ ಸ್ಯಾಂಪಲ್‌ ಗಳಲ್ಲಿ ಒಂದು ಎನ್ನುತ್ತಾರೆ ಶಂಸುಲ್ ಅವರು. ನೇತಾಜಿ ಸುಭಾಶ್ಚಂದ್ರ ಬೋಸ್ ಅವರಂತಹ ದೇಶಭಕ್ತ ನಾಯಕರು ಸಶಸ್ತ್ರ ಹೋರಾಟದ ಮೂಲಕ ಭಾರತದಿಂದ ಬ್ರಿಟಿಷ್ ಆಳ್ವಿಕೆ ಹೊರಹಾಕುವ ತಂತ್ರವನ್ನು ರೂಪಿಸಲು ಪ್ರಯತ್ನಿಸುತ್ತಿರುವಾಗ ಬ್ರಿಟಿಷ್ ಯುದ್ಧದ ಪ್ರಯತ್ನಗಳಿಗೆ ಸಾವರ್ಕರ್ ಅವರ ಸಂಪೂರ್ಣ ಬೆಂಬಲವು ಒಂದು ಪೂರ್ವನಿಯೋಜಿತ ಹಾಗೂ ಚೆನ್ನಾಗಿ ಯೋಚಿಸಲ್ಪಟ್ಟ ಅಪಾಯಕಾರಿ ಹಿಂದುತ್ವ ವಿನ್ಯಾಸದ ಫಲಿತಾಂಶವಾಗಿತ್ತು ಎನ್ನುತ್ತಾರೆ ಶಂಸುಲ್. ಇದನ್ನು 1940ರ ಮಥುರಾದಲ್ಲಿ ನಡೆದ ಹಿಂದೂ ಮಹಾಸಭೆಯ 22ನೇ ಅಧಿವೇಶನದಲ್ಲಿ ಸಾವರ್ಕರ್ ಅವರು ತಮ್ಮ ಆಯ್ಕೆ ಏನೆಂಬುದನ್ನು ಸ್ಪಷ್ಟಪಡಿಸಿದ್ದು ಶಂಸುಲ್ ಇಸ್ಲಾಮ್ ಅವರು ದಾಖಲೆ ಸಮೇತ ವಿವರಿಸಿದ್ದಾರೆ.

ಸಾವರ್ಕರ್ ಅವರು ಮುಂದಿನ ಕೆಲವು ವರ್ಷಗಳ ಕಾಲ ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ಹಿಂದೂಗಳ ನೇಮಕಾತಿ ಶಿಬಿರಗಳನ್ನು ಆಯೋಜಿಸಲು ಆರಂಭಿಸಿದರಂತೆ. ನಂತರ ಈಶಾನ್ಯ ಭಾರತದ ವಿವಿಧ ಭಾಗಗಳಲ್ಲಿ ನೇತಾಜಿಯವರ ಅಝಾದ್ ಹಿಂದ್ ಫೌಜಿನ ಅನೇಕ ಸೈನಿಕರ ಹತ್ಯೆಗಳು ನಡೆದು ಹೋಗುತ್ತವೆ. ಹಿಂದೂ ಮಹಾಸಭೆಯ ಮಧುರಾ ಸಮ್ಮೇಳನವು ಕೆಲವು ತುರ್ತು ನಿರ್ಣಯಗಳನ್ನು ತೆಗೆದುಕೊಳ್ಳುವುದರೊಂದಿಗೆ ಮುಕ್ತಾಯಗೊಂಡಿತ್ತಂತೆ. ಆ ನಿರ್ಣಯಗಳೆಂದರೆ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ ಎಷ್ಟು ಸಾಧ್ಯವೋ ಅಷ್ಟು ಹಿಂದೂಗಳನ್ನು ಸೇರಿಸುವುದಾಗಿತ್ತಂತೆ. ಕೇವಲ ಹಿಂದೂ ಮಹಾಸಭೆಯ ಪ್ರಯತ್ನದಿಂದ ಒಂದು ವರ್ಷದಲ್ಲಿ ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸಶಸ್ತ್ರ ಪಡೆಗಳಲ್ಲಿ ನೇಮಿಸಿಕೊಳ್ಳಲಾಗಿದೆ ಎಂದು ಸಾವರ್ಕರ್ ಸ್ವತಃ ಘೋಷಿಸಿದ್ದರಂತೆ. ಇದೇ ಅವಧಿಯಲ್ಲಿ ಆರ್‌ ಎಸ್‌ ಎಸ್ ಸಾವರ್ಕರ್  ಅವರನ್ನು ಸಂಘದ ಯುವ ಘಟಕದ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ಆಹ್ವಾನಿಸುತ್ತಲೇ ಇತ್ತು ಎಂಬುದರ ಕುರಿತು ಶಂಸುಲ್ ಅವರು ವಿವರಿಸಿದ್ದಾರೆ.

ಸಾವರ್ಕರ್ ಅವರ ನಾಯಕತ್ವದಲ್ಲಿ ಹಿಂದೂ ಮಹಾಸಭೆಯು ದೇಶದ ವಿವಿಧ ಪ್ರದೇಶಗಳಲ್ಲಿ ಉನ್ನತ ಮಟ್ಟದ ಮಂಡಳಿಗಳನ್ನು ಆಯೋಜಿಸಿ ಬ್ರಿಟಿಷ್ ಸಶಸ್ತ್ರ ಪಡೆಗಳಲ್ಲಿ ನೇಮಕಾತಿ ಬಯಸುವ ಹಿಂದೂಗಳಿಗೆ ಸಹಾಯ ಮಾಡುತ್ತಿತ್ತಂತೆ. ಈ ಮಂಡಳಿಗಳು ಬ್ರಿಟಿಷ್ ಸರ್ಕಾರದೊಂದಿಗೆ ನೇರ ಸಂಪರ್ಕದಲ್ಲಿದ್ದವು ಎಂಬುದನ್ನು ಸಾವರ್ಕರ್ ಅವರು ಹಿಂದೂ ಮಹಾಸಭೆಯ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ ಈ ಕೆಳಗಿನ ಮಾತುಗಳು ಸ್ಪಷ್ಟಪಡಿಸುತ್ತವೆ ಎನ್ನುತ್ತಾರೆ ಶಂಸುಲ್: ಸೈನ್ಯಕ್ಕೆ ನೇಮಕಗೊಳ್ಳುವ ಹಿಂದೂಗಳಿಗೆ ಕಾಲಕಾಲಕ್ಕೆ ಎದುರಾಗುವ ತೊಂದರೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ದಿಲ್ಲಿಯಲ್ಲಿ ಶ್ರೀ ಗಣಪತ್ ರಾಯ್ ಅವರನ್ನು ಹಿಂದೂ ಮಹಾಸಭಾದ ಸೆಂಟ್ರಲ್ ನಾರ್ದರ್ನ್ ಹಿಂದೂ ಮಿಲಿಟರೈಸೇಶನ್ ಬೋರ್ಡ್‌ ನ ಸಂಚಾಲಕರನ್ನಾಗಿಯು,  ಎಲ್ ಬಿ ಭೋಪಾಟ್ಕರ್ ಅವರನ್ನು ಕೇಂದ್ರ ದಕ್ಷಿಣ ಹಿಂದೂ ಮಿಲಿಟರಿ ಬೋರ್ಡ್ ಸಹ ಅಧ್ಯಕ್ಷರನ್ನಾಗಿಯೂ ನೇಮಿಸಿದೆ ಎನ್ನುವ ಕುರಿತು ಸಾವರ್ಕರ್ ಹಿಂದೂ ಮಹಾಸಭಾ ಸೈನಿಕಾಕಾಂಕ್ಷಿಗಳಿಗೆ ನೀಡಿದ ಮಾಹಿತಿಯನ್ನು ಶಂಸುಲ್ ಅವರು ಪ್ರಸ್ತಾಪಿಸಿದ್ದಾರೆ.

ಬ್ರಿಟಿಷ್ ಸೇನೆ ಸೇರಲಿಚ್ಛಿಸುವ ಮತ್ತು ಈಗಾಗಲೇ ಸೇರಿರುವ ಹಿಂದೂ ಮಹಾಸಭೆಯ ಕಾರ್ಯಕರ್ತರು ದೂರು/ಸಹಾಯಗಳಿಗಾಗಿ ಹಾಗು ಹೆಚ್ಚಿನ ಮಾಹಿತಿಗಾಗಿ ಮೇಲಿನವರಿಗೆ ಮಾಹಿತಿ ತಿಳಿಸಬೇಕು ಎಂದು ಸಾವರ್ಕರ್ ಕರೆಕೊಟ್ಟಿದ್ದರಂತೆ. ಇದಷ್ಟೇ ಅಲ್ಲದೆ ಸರ್ ಜ್ವಾಲಾ ಪ್ರಸಾದ್ ಶ್ರೀವಾಸ್ತವ್ ಬ್ಯಾರಿಸ್ಟರ್ ಜಮ್ನಾದಾಸ್ಜಿ ಮೆಹ್ತಾ, ಬಾಂಬೆ; ವಿ.ವಿ. ಕಾಲಿಕರ್, ಎಂಎಲ್ಸಿ, ನಾಗ್ಪುರ ಮತ್ತು ರಾಷ್ಟ್ರೀಯ ರಕ್ಷಣಾ ಮಂಡಳಿ ಅಥವಾ ಸಲಹಾ ಯುದ್ಧ ಸಮಿತಿಯ ಇತರ ಸದಸ್ಯರಿರುವ ಈ ಮಿಲಿಟರಿ ಬೋರ್ಡ್‌ಗಳಿಗೆ ಬ್ರಿಟಿಷ್ ಸೇನೆ ಸೇರಿದ ಹಿಂದೂಗಳು ತಮ್ಮ ಕುಂದುಕೊರತೆಗಳು ರವಾನಿಸಿದರೆ ಅವಕ್ಕೆ ಸಾಧ್ಯವಾದಷ್ಟು ಪರಿಹಾರಗಳನ್ನು ಸೂಚಿಸುತ್ತಾರೆಂದು ಸಾವರ್ಕರ್ ಹೇಳಿದ್ದರಂತೆ (ಐಬಿಐಡಿ ಗ್ರಂಥದ ಪುಟ 20 7 ರಲ್ಲಿ ಉಲ್ಲೇಖಿಸಲಾಗಿದೆ). ಬ್ರಿಟಿಷ್ ಸರ್ಕಾರವು ತನ್ನ ಅಧಿಕೃತ ಪ್ರಾದೇಶಿಕ ಯುದ್ಧ ಸಮಿತಿಗಳಲ್ಲಿ ಹಿಂದೂ ಮಹಾಸಭೆಯ ನಾಯಕರಿಗೆ ಅವಕಾಶ ಕಲ್ಪಿಸಿತ್ತು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.

ಸಾವರ್ಕರ್ ಅವರನ್ನು ಮಹಾನ್ ದೇಶಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವವರು ಬ್ರಿಟಿಷ್ ಸೈನ್ಯಕ್ಕೆ ಸೇರಲಿರುವ ಹಿಂದೂಗಳಿಗೆ ಸಾವರ್ಕರ್ ಅವರ ಈ ಕೆಳಗಿನ ಸೂಚನೆ ಓದಿ ನಾಚಿಕೆಯಿಂದ ತಲೆ ತಗ್ಗಿಸಬೇಕು:

ಆದರೆ ಈ ಸಂದರ್ಭದಲ್ಲಿ ಒಂದು ಅಂಶವನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ. ಇದರಲ್ಲಿ ನಮ್ಮ ಸ್ವಂತ ಹಿತಾಸಕ್ತಿ ಅಡಗಿದೆ. ಬ್ರಿಟಿಷ್ ಸೇನೆಯನ್ನು ಸೇರುವ ಹಿಂದೂಗಳು ಯಾವಾಗಲೂ ಅಲ್ಲಿ ಚಾಲ್ತಿಯಲ್ಲಿರುವ ಮಿಲಿಟರಿ ಶಿಸ್ತು ಮತ್ತು ಸುವ್ಯವಸ್ಥೆಗೆ ಸಂಪೂರ್ಣವಾಗಿ ಹೊಂದಿಕೊಳ್ಳಬೇಕು ಮತ್ತು ಅದಕ್ಕೆ ವಿಧೇಯರಾಗಿರಬೇಕು. ಬ್ರಿಟಿಷ್ ಮಿಲಿಟರಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಹಿಂದೂಗಳ ಗೌರವ ಹಾಗು ಭಾವನೆಗಳನ್ನು ಅವಮಾನಿಸುವ ಗುರಿ ಹೊಂದಿಲ್ಲ. ಅದು ಮಿಲಿಟರಿ ಶಿಸ್ತು ಎಂದು ಮಾತ್ರ ಹಿಂದೂಗಳು ಭಾವಿಸಬೇಕು. ಇದು ಸಾವರ್ಕರ್ ಹಿಂದೂ ಸೈನಿಕರಿಗೆ ಹೇಳಿದ ಬ್ರಿಟಿಷ್ ನಿಷ್ಠೆಯ ಪಾಠವಾಗಿತ್ತು ಎನ್ನುತ್ತಾರೆ ಶಂಸುಲ್. ಈ ಸಂಗತಿಯು ಐಬಿಐಡಿ ಗ್ರಂಥದ ಪುಟ ಸಂಖ್ಯೆ 207 ಯಲ್ಲಿ ಉಲ್ಲೇಖವಾಗಿದೆ ಎಂದು ಶಂಸುಲ್ ಇಸ್ಲಾಮ್ ಅವರು ತಮ್ಮ ಅಂಕಣ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ತನ್ನ ಅತ್ಯುನ್ನತ ಯುದ್ಧ ಸಂಸ್ಥೆಗಳ ಸಂಘಟನೆಗೆ ಸಂಬಂಧಿಸಿದಂತೆ ಬ್ರಿಟಿಷ್ ಸರ್ಕಾರವು ಸಾವರ್ಕರ್ ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿತ್ತು ಎನ್ನುವುದಕ್ಕೆ ಸಾವರ್ಕರ್ ಅವರು ಸಲಹೆ ಮಾಡಿದ ವ್ಯಕ್ತಿಗಳ ಹೆಸರುಗಳು ಸಾಕ್ಷಿಯಾಗಿವೆ. ಸಾವರ್ಕರ್  ಅವರು ಅಂದು ಬ್ರಿಟಿಷ್ ಸರಕಾರಕ್ಕೆ ಕಳುಹಿಸಿದ ಕೆಳಗಿನ ಕೃತಜ್ಞತಾ ಟೆಲಿಗ್ರಾಮ್‌ ನಿಂದ ಈ ಸಂಗತಿ ಇನ್ನೂ ಸ್ಪಷ್ಟವಾಗುತ್ತದೆ. ಈ ವಿಷಯ ಭಿಡೆ ಅವರು ಬರೆದ ಸಂಪುಟ ನಮಗೆ ಸ್ಪಷ್ಟಪಡಿಸುತ್ತದೆ.

ಭಿಡೆಯವರ ಸಂಪುಟದಲ್ಲಿ ಟೆಲಿಗ್ರಾಮ್ ಸಂದೇಶ ಕುರಿತು ಹೀಗೆ ಬರೆಯಲಾಗಿದೆ:

ಕೆಳಗಿನ ಟೆಲಿಗ್ರಾಮ್ ಅನ್ನು ಹಿಂದೂ ಮಹಾಸಭೆಯ ಅಧ್ಯಕ್ಷರಾದ ಬ್ಯಾರಿಸ್ಟರ್ ವಿ.ಡಿ. ಸಾವರ್ಕರ್ ಅವರು ಕಮಾಂಡರ್ ಇನ್-ಚೀಫ್ ಜನರಲ್ ವೇವೆಲ್ ಮತ್ತು ಭಾರತದ ವೈಸರಾಯ್ ಅವರಿಗೆ ಜುಲೈ 18, 1941ರಂದು ಕಳುಹಿಸಿದ್ದಾರೆ. ಆ ಟೆಲಿಗ್ರಾಮ್ ಸಂದೇಶದಲ್ಲಿ ಹೀಗೆ ಬರೆಯಲಾಗಿದೆ: ಗೌರವಾನ್ವಿತರೆ,  ಘೋಷಿಸಲಾದ ರಕ್ಷಣಾ ಸಮಿತಿ ಹಾಗು ಅದಕ್ಕೆ ನೇಮಿಸಲಾದ ಸಿಬ್ಬಂದಿಗೆ ನನ್ನ ಸ್ವಾಗತವಿದೆ. ಹಿಂದೂ ಮಹಾಸಭೆಯು ಮೆಸ್ಸರ್ಸ್ ಕಾಲಿಕರ್ ಮತ್ತು ಜಮ್ನಾದಾಸ್ ಮೆಹ್ತಾ ಅವರ ನೇಮಕಾತಿಯಿಂದ ವಿಶೇಷ ತೃಪ್ತಿ ಹೊಂದಿದೆ. ಈ ಸಂಗತಿ ಕೂಡ ಐಡಿಐಬಿ ಗ್ರಂಥದ ಪುಟ ಸಂಖ್ಯೆ 451 ಉಲ್ಲೇಖಿಸಲಾಗಿದೆ ಎನ್ನಲಾಗುತ್ತದೆ.

ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಬ್ರಿಟಿಷ್ ಆಡಳಿತಗಾರರ ಹಿತಾಸಕ್ತಿಗಳನ್ನು ಬೆಂಬಲಿಸುವ ಮುಸ್ಲಿಂ ಲೀಗ್ ಕೂಡ ಸಾವರ್ಕರ್ ಮಾಡಿದಂತೆ ಬ್ರಿಟಿಷ್ ಸರ್ಕಾರ ಸ್ಥಾಪಿಸಿದ ರಕ್ಷಣಾ ಸಮಿತಿಗಳನ್ನು ಸೇರಲು ನಿರಾಕರಿಸಿತ್ತು ಎನ್ನುವ ಸಂಗತಿ.

ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ನಂಬಿದ್ದರು ಹಾಗು ಪ್ರತಿಪಾದಿಸಿದ್ದರು ಅಷ್ಟೇ ಅಲ್ಲದೆ ಅವರು ಮುಸ್ಲಿಂ ಲೀಗ್‌ ನೊಂದಿಗೆ ಸೇರಿ ಪ್ರಾದೇಶಿಕ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿದ್ದರು. ಆದರೆ ಮುಸ್ಲಿಮ್ ಲೀಗ್ ಸಾವರ್ಕರ್ ಅವರಷ್ಟು ಬ್ರಿಟಿಷ್ ಸರಕಾರಕ್ಕೆ ವಿಧೇಯವಾಗಿರಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕಿದೆ. ಭಗತ್ ಸಿಂಗ್ ಮತ್ತು ನೇತಾಜಿಯವರ ಮುಕ್ತ ಪ್ರಜಾಪ್ರಭುತ್ವ ಹಾಗು ಜಾತ್ಯತೀತ ಭಾರತದ ಕನಸನ್ನು ಸಾವರ್ಕರ್  ಬಹಿರಂಗವಾಗಿ ವಿರೋಧಿಸಿದ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ ಎನ್ನುತ್ತಾರೆ ಶಂಸುಲ್ ಅವರು.

ಇತಿಹಾಸದಿಂದ ಅಲ್ಲಗಳೆಯಲಾಗದ ಅನೇಕ ಸಂಗತಿಗಳು ಹಿಂದುತ್ವ ಸಂಘಟನೆಗಳ ದಾಖಲೆಗಳಲ್ಲಿಯೂ ಸಹ ಲಭ್ಯ ಇವೆ ಎನ್ನುವುದನ್ನು ನಾವು ಮರೆಯಬಾರದು. ಮಹಾನ್ ಹುತಾತ್ಮರಾದ ಭಗತ್ ಸಿಂಗ್ ಹಾಗು ನೇತಾಜಿಯವರ ಪ್ರತಿಮೆಗಳೊಡನೆ ಸಾವರ್ಕರ್ ಅವರ ಪ್ರತಿಮೆ ದಿಲ್ಲಿ ವಿವಿಯಲ್ಲಿ ಸಂಘ ಪರಿವಾರದ ವಿದ್ಯಾರ್ಥಿ ಘಟಕ ಸ್ಥಾಪಿಸಿರುವುದು ಭಗತ್‌ಸಿಂಗ್ ಮತ್ತು ನೇತಾಜಿಯವರ ಮರು ಹತ್ಯೆ ಎಂದೇ ನಾವು ಭಾವಿಸಬೇಕಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದ ಈ ಮಹಾನ್ ನಾಯಕರ ಎದುರಿಗೆ ಈ ಸಾವರ್ಕರ್ ಅವರು ಇವರ ಸಿದ್ದಾಂತಗಳಿಗೆ ತದ್ವಿರುದ್ಧವಾಗಿ ಪ್ರತ್ಯೇಕ ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಟ್ಟು ರಾಷ್ಟ್ರದ ವಿಭಜನೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದರು ಹಾಗು ಮುಸ್ಲಿಂ ಲೀಗ್‌ ಗಿಂತ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. 1937ರಲ್ಲಿ ಅಹಮದಾಬಾದ್‌ ನಲ್ಲಿ ನಡೆದ ಹಿಂದೂ ಮಹಾಸಭೆಯ 19ನೇ ಅಧಿವೇಶನವನ್ನು ಉದ್ದೇಶಿಸಿ ಸಾವರ್ಕರ್ ಅವರು ಹೀಗೆ ಹೇಳಿದ್ದರು: ಭಾರತದಲ್ಲಿ ಎರಡು ವಿರೋಧಾತ್ಮಕ ರಾಷ್ಟ್ರಗಳು ಅಕ್ಕಪಕ್ಕದಲ್ಲಿ ಬದುಕುತ್ತಿವೆ. ಭಾರತವು ಈಗಾಗಲೇ ಸಾಮರಸ್ಯದ ರಾಷ್ಟ್ರವಾಗಿದೆ ಎಂದು ನಂಬಿರುವ ಅಥವಾ ಸಾಮರಸ್ಯದ ರಾಷ್ಟ್ರವಾಗಿಸಬೇಕೆಂದು ಬಯಸುವ ಹಲವು ಬಾಲಿಶ ರಾಜಕಾರಣಿಗಳು ಗಂಭೀರ ತಪ್ಪನ್ನು ಮಾಡುತ್ತಾರೆ. ಇದರ ಅಡ್ಡ ಪರಿಣಾಮಗಳಿಗಾಗಿ ಅವರು ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಸಂಗತಿಗಳನ್ನು ನಾವು ಧೈರ್ಯದಿಂದ ಎದುರಿಸೋಣ. ಭಾರತವು ಇಂದು ಏಕತಾವಾದಿ ಮತ್ತು ಏಕತ್ರ ರಾಷ್ಟ್ರವೆಂದು ಭಾವಿಸಲಾಗುವುದಿಲ್ಲ, ಆದರೆ ಇದಕ್ಕೆ ವಿರುದ್ಧವಾಗಿ ಮುಖ್ಯವಾಗಿ ಈ ನೆಲದಲ್ಲಿ ಎರಡು ರಾಷ್ಟ್ರಗಳಿವೆ: ಹಿಂದೂ ಮತ್ತು ಮುಸ್ಲಿಮ್. ಈ ವಿಷಯ ‘ಸಮಗ್ರ ಸಾವರ್ಕರ್ ವಾಙ್ಮಯ’ (ಸಾವರ್ಕರ್ ಅವರ ಬರಹ, ಭಾಷಣಗಳ ಸಂಗ್ರಹ) ಪ್ರಕಾಶಕರು: ಹಿಂದೂ ಮಹಾಸಭಾ ಪೂನಾ, 1963, ಪುಟ 296 ರಲ್ಲಿ ಉಲ್ಲೇಖಿಸಲಾಗಿದೆ ಎಂದು ಶಂಸುಲ್ ಇಸ್ಲಾಮ್ ಅವರು ಬರೆದಿದ್ದಾರೆ.

ಆದರೆ ಮುಸ್ಲಿಂ ಲೀಗ್ ತನ್ನ ಪಾಕಿಸ್ತಾನ ನಿರ್ಣಯವನ್ನು 1940ರಲ್ಲಿ ಮಾತ್ರ ಅಂಗೀಕರಿಸಿತ್ತು ಎಂಬ ಅಂಶವನ್ನು ನಾವು ಮರೆಯಬಾರದು. ಆರ್‌ ಎಸ್‌ ಎಸ್‌ ನ ಮಹಾನ್  ತತ್ವಜ್ಞಾನಿ ಮತ್ತು ಮಾರ್ಗದರ್ಶಕರಾದ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಬಹಳ ಹಿಂದೆಯೇ ಪ್ರಚಾರ ಮಾಡಿದ್ದರು. ಮಾತ್ರವಲ್ಲದೆ ‘ಕ್ವಿಟ್ ಇಂಡಿಯಾ ಚಳುವಳಿ’ಯನ್ನು ಹಾಳುಗೆಡವಲು ಮುಸ್ಲಿಂ ಲೀಗ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ಮುಸ್ಲಿಮ್ ಲೀಗ್‌ ನೊಂದಿಗಿನ ಅವರ ಮೈತ್ರಿಯನ್ನು 1942ರಲ್ಲಿ ಕಾನ್ಪುರ ಹಿಂದೂ ಮಹಾಸಭೆಯ 24ನೇ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡುವಾಗ, ಸಾವರ್ಕರ್  ಅವರು ಈ ರೀತಿ ಸಮರ್ಥಿಸಿಕೊಂಡಿದ್ದರು:

ಪ್ರಾಯೋಗಿಕ ರಾಜಕಾರಣದಲ್ಲಿ ನಾವು ಸಮಂಜಸವಾದ ಹೊಂದಾಣಿಕೆಗಳ ಮೂಲಕ ಮುನ್ನಡೆಯಬೇಕು ಎಂದು ಮಹಾಸಭೆ ಅರಿತಿದೆ. ಇತ್ತೀಚೆಗೆ ಸಿಂಧ್‌ ನಲ್ಲಿ, ಸಿಂಧ್-ಹಿಂದೂ-ಸಭಾ ಆಹ್ವಾನದ ಮೇರೆಗೆ ಸಮ್ಮಿಶ್ರ ಸರ್ಕಾರ ರಚನೆಗಾಗಿ ಮುಸ್ಲಿಮ್ ಲೀಗ್‌ ನೊಂದಿಗೆ ಕೈಜೋಡಿಸುವ ನಿರ್ಣಯವನ್ನು ತೆಗೆದುಕೊಂಡಿದೆ. ಇದೇ ರೀತಿ ಬಂಗಾಳದಲ್ಲಿಯೂ ನಾವು ಮುಸ್ಲಿಮ್ ಲೀಗ್ ಜೊತೆ ಸೇರಿದ್ದೇವೆ ಎಂದು ಸಾವರ್ಕರ್ ಹೇಳಿದ ಬಗ್ಗೆ ಶಂಸುಲ್ ವಿವರಿಸಿದ್ದಾರೆ.

ಸಾವರ್ಕರ್ ಅವರ ಹಿಂದೂ ಮಹಾಸಭೆಯ ಬ್ರಿಟಿಷ್ ಪರವಾದ ನಿಲುವು ಮತ್ತು ಅವರ ಮುಸ್ಲಿಮ್ ಲೀಗ್‌ ನೊಂದಿಗಿನ ಒಡನಾಟವು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯಗಳು. ಅವುಗಳನ್ನು ಯಾವ ಕಾರಣದಿಂದಲೂ ಅಳಿಸಿಹಾಕಲು ಸಾಧ್ಯವಿಲ್ಲ. ಹಿಂದೂ ಮಹಾಸಭೆಯು ಅಂದು ಬಂಗಾಳದಲ್ಲಿ  ಫಝಲುಲ್ ಹಕ್ ಅವರನ್ನು ಪ್ರಧಾನ ಮಂತ್ರಿ ಮಾಡಿ ಅಂದಿನ ಹಿಂದೂ ಮಹಾಸಭೆಯ ಇನ್ನೊಬ್ಬ ಪ್ರಮುಖ ನಾಯಕರಾಗಿದ್ದ ಶಾಮಾಪ್ರಸಾದ್ ಮುಖರ್ಜಿಯವರನ್ನು ಉಪಪ್ರಧಾನಿಯನ್ನಾಗಿ ಮಾಡಿ ಪ್ರಾದೇಶಿಕ ಸಮ್ಮಿಶ್ರ ಸರ್ಕಾರ ರಚಿಸಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದನ್ನು ನಾವು ಮರೆಯುವಂತಿಲ್ಲ. ಇತಿಹಾಸದಿಂದ ಅಳಿಸಲಾಗದ ಮತ್ತು ಹಿಂದುತ್ವ ಸಂಘಟನೆಗಳ ದಾಖಲೆಗಳಲ್ಲಿಯೂ ಸಹ ಲಭ್ಯವಿರುವ ಈ ಎಲ್ಲ ಅಸಂಗತ ಸಂಗತಿಗಳೊಂದಿಗೆ ಬಿಡಿಸಲಾಗದ ನಂಟು ಹೊಂದಿರುವ ವಿವಾದಾತ್ಮಕ ವ್ಯಕ್ತಿ ಸಾವರ್ಕರ್ ಅವರ ಪ್ರತಿಮೆಯನ್ನು ಮಹಾನ್ ಹುತಾತ್ಮರು ಅಪ್ರತಿಮ ದೇಶಭಕ್ತರು ಆಗಿದ್ದ ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗಳ ಜೊತೆಯಲ್ಲಿ ಈ ಹಿಂದುತ್ವವಾದಿ ಸಂಘಟನೆಗಳು ಪ್ರತಿಷ್ಠಾಪಿಸಿದ ಘಟನೆಯು ಆ ಇಬ್ಬರು ಮಹಾನ್ ದೇಶಪ್ರೇಮಿ ನಾಯಕರ ಮರು ಹತ್ಯೆ ಎಂದೇ ನಾವು ವ್ಯಾಖ್ಯಾನಿಸಬೇಕಿದೆ ಎನ್ನುತ್ತಾರೆ ಶಂಸುಲ್ ಇಸ್ಲಾಮ್ ಅವರು. ಹೀಗೆ ಇಡೀ ಅಂಕಣದ ತುಂಬಾ ಸಾವರ್ಕರ್ ಅವರ ದ್ವಂದ್ವಗಳು, ಸ್ವಾತಂತ್ರ ಚಳುವಳಿ ದಿಕ್ಕು ತಪ್ಪಿಸುವ ಅವರ ಕೃತ್ಯಗಳು ಹಾಗೂ ಅವರ ಬ್ರಿಟಿಷ್ ಪರವಾದ ಅಚಲ ನಿಷ್ಠೆಯನ್ನು ಶಂಸುಲ್ ಇಸ್ಲಾಮ್ ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

2004ರ ನಂತರ ಮೋದಿ ಪ್ರಧಾನಿಯಾಗುವ ಮೂಲಕ ದಿಲ್ಲಿ ಗದ್ದುಗೆ ಬಲಪಂಥಿಯ ಹಿಂದುತ್ವವಾದಿ ಗುಂಪುಗಳು ವಶಪಡಿಸಿಕೊಂಡಾದ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಮತ್ತು ಗೋಡ್ಸೆಯ ಗುರು ಹಾಗು ಪ್ರೀತಿಯ ಪುರುಷ ಸಂಗಾತಿಯಾಗಿದ್ದ ಸಾವರ್ಕರ್ ಅವರನ್ನು ಹಾಗೂ ಇನ್ನೂ ಅನೇಕ ಉಗ್ರವಾದಿ ಹಿಂದುತ್ವದ ಪ್ರತಿಪಾದಕರನ್ನು ಮಹಾನ್ ದೇಶಭಕ್ತರಂತೆ ಬಿಂಬಿಸುವ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಇದು ಬಿಜೆಪಿ ಮತ್ತು ಸಂಘ ಪರಿವಾರದ ಇತಿಹಾಸ ತಿರುಚುವ ಕಾರ್ಯದ ಮುಂದುವರೆದ ಪ್ರಯತ್ನವಾಗಿದೆ. ಮುಂದಿನ ತಲೆಮಾರಿನ ಯುವಕರು ಈ ಅಸಂಗತ ಹಾಗು ಸುಳ್ಳು ಇತಿಹಾಸವನ್ನೇ ನಂಬುವ ಅಪಾಯ ದಟ್ಟವಾಗಿದೆ. ಆದರೂ ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುತ್ತ ಹಿಂದುತ್ವವಾದಿಗಳು ಈ ಬೃಹತ್ ಬಹುತ್ವ ಭಾರತದ ಆಡಳಿತ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆದರೆ ಹಿಂದುತ್ವದ ಗುಪ್ತ ಸೂಚಿಯ ಆಳದಲ್ಲಿ ಹುದುಗಿರುವ ಈ ನೆಲಕ್ಕೆ ಅಪಾಯಕಾರಿಯಾಗಿರುವ ಬ್ರಾಹ್ಮಣ್ಯವು ಹಿಂದುತ್ವವೆನ್ನುವ ಭ್ರಮೆಯನ್ನು ಬೆಂಬಲಿಸುತ್ತಿರುವ ಬಹುಜನರಿಗೆ ಒಂದಿಲ್ಲ ಒಂದು ದಿನ ಅರ್ಥವಾಗದೆ ಇರಲಾರದು. ಆದರೆ ಅಲ್ಲಿಯವರೆಗೆ ಹಿಂದುತ್ವವಾದಿಗಳ ಈ ದ್ವೇಷ ಸಿದ್ದಾಂತವು ಈ ದೇಶದ ಸಾಮಾಜಿಕ ಸಹಬಾಳ್ವೆಯ ಸಹಜ ರೂಪುರೇಷೆ, ಬಹುತ್ವ ಪರಂಪರೆಯ ಬಾಳ್ವೆಯ ಮಾರ್ಗ ಮತ್ತು ಸೌಹಾರ್ದತೆಯ ವಾತಾವರಣಗಳಿಗೆ ಬಹುದೊಡ್ಡ ಹಾನಿ ಮಾಡುವುದನ್ನು ತಪ್ಪಿಸಲಾಗದು.

Join Whatsapp